ದೇಶ

ಲೋಕಸಭೆಯಲ್ಲಿ ರಾಹುಲ್ ಭಾಷಣ ಮಾಡಿದ್ದು 37 ನಿಮಿಷ, ಸಂಸದ್ ಟಿವಿ ತೋರಿಸಿದ್ದು ಕೇವಲ 14 ನಿಮಿಷ: ಕಾಂಗ್ರೆಸ್

Ramyashree GN

ನವದೆಹಲಿ: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ 37 ನಿಮಿಷಗಳ ಕಾಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು, ಸಂಸದ್ ಟಿವಿ ಶೇ 40ಕ್ಕಿಂತ ಕಡಿಮೆ ಅಂದರೆ ಕೇವಲ 14 ನಿಮಿಷಗಳ ಕಾಲ ಮಾತ್ರ ಅವರನ್ನು ಪರದೆ ಮೇಲೆ ತೋರಿಸಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.

ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿ 37 ನಿಮಿಷಗಳ ಕಾಲ ಮಾತನಾಡಿದ್ದಾರೆ. ಆದರೆ, ಸಂಸದ್ ಟಿವಿ ಕ್ಯಾಮೆರಾದಲ್ಲಿ ಕೇವಲ 14 ನಿಮಿಷ 37 ಸೆಕೆಂಡುಗಳ ಕಾಲ ಮಾತ್ರ ತೋರಿಸಲಾಗಿದೆ ಎಂದು ದೂರಿದ್ದಾರೆ.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ರಾಹುಲ್ ಗಾಂಧಿ ಮಣಿಪುರದ ಬಗ್ಗೆ ಮಾತನಾಡುತ್ತಿದ್ದರೆ, ಹೆಚ್ಚಿನ ಸಮಯ ಅವರನ್ನು ಸಂಸದ್ ಟಿವಿಯ ಕ್ಯಾಮೆರಾ ಸೆರೆಹಿಡಿಯಲಿಲ್ಲ. ಏಕೆಂದರೆ ಶೇ 71ರಷ್ಟು ಸಮಯ ಅದು ಸ್ಪೀಕರ್ ಮೇಲೆ ಕೇಂದ್ರೀಕೃತವಾಗಿತ್ತು ಎಂದಿದ್ದಾರೆ.

'ಅನ್ಯಾಯದ ಅನರ್ಹತೆಯಿಂದ ಮತ್ತೆ ಸ್ಥಾನ ಪಡೆದ ರಾಹುಲ್ ಗಾಂಧಿ ಅವರು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿದ್ದಾರೆ. ಈ ವೇಳೆ ರಾಹುಲ್ ಮಧ್ಯಾಹ್ನ 12.09 ರಿಂದ 12.46 ರವರೆಗೆ ಅಂದರೆ 37 ನಿಮಿಷ ಮಾತನಾಡಿದರು. ಇದರಲ್ಲಿ ಸಂಸದ್ ಟಿವಿ ಕೇವಲ 14 ನಿಮಿಷ 37 ಸೆಕೆಂಡುಗಳ ಕಾಲ ಅವರನ್ನು ತೆರೆ ಮೇಲೆ ತೋರಿಸಿದೆ. ಇದು ಶೇ 40ಕ್ಕಿಂತ ಕಡಿಮೆ ಸ್ಕ್ರೀನ್ ಟೈಮ್! ಮಿಸ್ಟರ್ ಮೋದಿ ಯಾರಿಗೆ ಹೆದರುತ್ತಿದ್ದಾರೆ?' ಎಂದು ಪ್ರಶ್ನಿಸುತ್ತಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಇದು ಅದಕ್ಕಿಂತ ಮತ್ತಷ್ಟು ಕೆಟ್ಟದಾಗಿದೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಮಣಿಪುರ ವಿಚಾರ ಕುರಿತು 15 ನಿಮಿಷ 42 ಸೆಕೆಂಡುಗಳ ಕಾಲ ಮಾತನಾಡಿದರು. ಈ ವೇಳೆ, ಸಂಸದ್ ಟಿವಿಯ ಕ್ಯಾಮೆರಾ 11 ನಿಮಿಷ 08 ಸೆಕೆಂಡುಗಳ ಕಾಲ ಸ್ಪೀಕರ್ ಓಂ ಬಿರ್ಲಾ ಅವರ ಮೇಲೆ ಕೇಂದ್ರೀಕರಿಸಿತ್ತು. ಅಂದರೆ ಶೇ 71ರಷ್ಟು ಸಮಯ. ಆದರೆ, ಸಂಸದ್ ಟಿವಿ ರಾಹುಲ್ ಗಾಂಧಿ ಅವರ ಮೇಲೆ ಕೇಂದ್ರೀಕರಿಸಿದ್ದು ಕೇವಲ 4 ನಿಮಿಷ 34 ಸೆಕೆಂಡುಗಳ ಕಾಲವಷ್ಟೇ' ಎಂದು ಕಾಂಗ್ರೆಸ್ ನಾಯಕ ಹೇಳಿದರು.

ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿಯವರು ಮಣಿಪುರದ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

SCROLL FOR NEXT