ದೇಶ

ಮಥುರಾದ ಬಂಕೆ ಬಿಹಾರಿ ದೇವಸ್ಥಾನದ ಬಳಿ ಗೋಡೆ ಕುಸಿದು ಐವರು ಸಾವು, ವಿಡಿಯೋ ವೈರಲ್!

Vishwanath S

ಮಥುರಾ(ಉತ್ತರ ಪ್ರದೇಶ): ಮಥುರಾದ ಬಂಕೆ ಬಿಹಾರಿ ದೇವಸ್ಥಾನದ ಬಳಿ ಮಂಗಳವಾರ ಭಾರೀ ಅಪಘಾತ ಸಂಭವಿಸಿದೆ. ಇಲ್ಲಿನ ದುಸೇಟ್ ಪ್ರದೇಶದಲ್ಲಿ ಮೂರು ಅಂತಸ್ತಿನ ಹಳೆಯ ಕಟ್ಟಡದ ಬಾಲ್ಕನಿ ಮತ್ತು ಗೋಡೆ ಕುಸಿದು ಐದು ಮಂದಿ ಸಾವನ್ನಪ್ಪಿದ್ದು ಸುಮಾರು 12 ಜನರು ಗಾಯಗೊಂಡಿದ್ದಾರೆ. 

ಜಿಲ್ಲಾ ಮ್ಯಾಜಿಸ್ಟ್ರೇಟ್ ಪುಲ್ಕಿತ್ ಖರೆ ಐದು ಮಂದಿ ಸಾವನಪ್ಪಿರುವುದನ್ನು ಖಚಿತಪಡಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವೃಂದಾವನದ ಸೌಶಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯಿಂದಾಗಿ ಮೂರು ಅಂತಸ್ತಿನ ಕಟ್ಟಡದ ಬಾಲ್ಕನಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಮೃತರು ಮತ್ತು ಗಾಯಗೊಂಡವರಿಗೆ ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ಡಿಎಂ ಪುಲ್ಕಿತ್ ಖರೆ ತಿಳಿಸಿದ್ದಾರೆ. ಇದರೊಂದಿಗೆ ಅವಘಡಕ್ಕೆ ಕಾರಣ ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದರು.

ಎಸ್‌ಎಸ್‌ಪಿ ಶೈಲೇಶ್ ಪಾಂಡೆ ಹೇಳಿದ್ದೇನು?
ಮತ್ತೊಂದೆಡೆ, ದುಸಾಯತ್ ಪ್ರದೇಶದ ಬಳಿ ಹಳೆಯ ಮೂರು ಅಂತಸ್ತಿನ ಮನೆ ಇತ್ತು ಎಂದು ಎಸ್‌ಎಸ್‌ಪಿ ಶೈಲೇಶ್ ಪಾಂಡೆ ತಿಳಿಸಿದ್ದಾರೆ. ಏಕಾಏಕಿ ಮನೆಯ ಮೇಲ್ಭಾಗ ಕುಸಿದಿದ್ದು, ಕೆಲವರು ಅವಶೇಷಗಳಡಿ ಸಿಲುಕಿದ್ದಾರೆ. ಪೊಲೀಸ್ ತಂಡದೊಂದಿಗೆ ಅಗ್ನಿಶಾಮಕ ದಳದ ತಂಡ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ನಗರ ಪಾಲಿಕೆ ತಂಡವನ್ನೂ ಸ್ಥಳಕ್ಕೆ ಕರೆಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. 

ಮಹಾನಗರ ಪಾಲಿಕೆ ತಂಡ ಕಟ್ಟಡವನ್ನು ಪರಿಶೀಲಿಸಲಿದೆ. ಕಟ್ಟಡದ ಯಾವುದೇ ಭಾಗ ಹಾಳಾಗಿರುವುದು ಕಂಡು ಬಂದರೆ ಅದನ್ನೂ ಕೆಡವುವ ಕೆಲಸ ಮಾಡಲಾಗುವುದು. ಅಪಘಾತದ ಸಿಸಿಟಿವಿ ದೃಶ್ಯಾವಳಿ ಕೂಡ ಬಯಲಿಗೆ ಬಂದಿದೆ. ಘಟನೆ ನಡೆದ ರಸ್ತೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಿರುವುದು ದೃಶ್ಯಾವಳಿಗಳಲ್ಲಿ ಕಂಡು ಬರುತ್ತಿದೆ.

SCROLL FOR NEXT