ದೇಶ

ವರುಣನ ಆರ್ಭಟಕ್ಕೆ ಉತ್ತರಾಖಂಡ, ಹಿಮಾಚಲ ಪ್ರದೇಶ ತತ್ತರ: ಸಾವಿನ ಸಂಖ್ಯೆ 66ಕ್ಕೆ ಏರಿಕೆ, ಜೋಶಿಮಠ ಬಳಿ ಕಟ್ಟಡ ಕುಸಿತ

Manjula VN

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಅನಾಹುತಗಳು ಸಂಭವಿಸುತ್ತಲೇ ಇವೆ. ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಅವಾಂತರಗಳಿಂದ ಈವರೆಗೆ 66 ಮಂದಿ ಸಾವನ್ನಪ್ಪಿದ್ದರೆ, ಉತ್ತರಾಖಂಡದಲ್ಲಿ 6 ಮಂದಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಭಾರತೀಯ ಹವಾಮಾನ ಇಲಾಖೆಯು ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಡೆಹ್ರಾಡೂನ್‌, ಪುರಿ, ತೆಹ್ರಿ, ನೈನಿತಾಲ್‌, ಚಂಪಾವತ್‌ ಮತ್ತು ಉಧಮ್‌ ಸಿಂಗ್‌ ನಗರಗಳು ಸೇರಿದಂತೆ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಈ ನಡುವೆ ಉತ್ತರಾಖಂಡದಲ್ಲಿ ಮಳೆ ರೌದ್ರನರ್ತನಕ್ಕೆ ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಪೀಡಿತ ಪ್ರದೇಶವಾದ ಜೋಶಿಮಠ ಸಮೀಪದ ಹೆಲಾಂಗ್‌ನಲ್ಲಿ ಮಂಗಳವಾರ ತಡರಾತ್ರಿ ಕಟ್ಟಡವೊಂದು ಕುಸಿದುಬಿದ್ದಿದ್ದು, ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆಗಳು ವ್ಯಕ್ತವಾಗಿವೆ. ಈವರೆಗೂ ಮೂವರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ತ್ವರಿತ ಗತಿಯಲ್ಲಿ ನಡೆಸಲಾಗುತ್ತಿದೆ.

ಮಂಗಳವಾರ ತಡರಾತ್ರಿ ಬದರಿನಾಥ ಹೆದ್ದಾರಿಯ ಪಿಪಲ್ಕೋಟಿ ಮತ್ತು ಜೋಶಿಮಠ ನಡುವಿನ ಹೆಲಾಂಗ್ ಗ್ರಾಮದಲ್ಲಿ ಕಟ್ಟಡ ಕುಸಿತ ಸಂಭವಿಸಿದೆ.

ಅಲಕನಂದಾ ನದಿ ದಡದಲ್ಲಿರುವ ಕ್ರಷರ್ ಘಟಕದ ಬಳಿ ಎರಡು ಅಂತಸ್ತಿನ ಮನೆ ನಿರ್ಮಿಸಲಾಗಿದ್ದು, ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಕ್ರಷರ್ ಘಟಕದಲ್ಲಿ ಕೆಲಸ ಮಾಡುವವರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಈ ಅವಘಡ ಸಂಭವಿಸಿದಾಗ ಕಟ್ಟಡದಲ್ಲಿ ಸಾಕಷ್ಟು ಮಂದಿ ಇದ್ದರು ಎಂದು ಹೇಳಲಾಗುತ್ತಿದೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಟ್ಟಡದ ಅವಶೇಷಗಳ ಅಡಿಯಲ್ಲಿ ನಾಲ್ವರು ಸಿಲುಕಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕಾರಿಗಳು ಇದನ್ನು ಇನ್ನೂ ಖಚಿತಪಡಿಸಿಲ್ಲ.

ಈ ವರ್ಷದ ಆರಂಭದಲ್ಲಿ ಜೋಶಿಮಠದಲ್ಲಿ ಭೂಕುಸಿತದಿಂದ ಹಲವಾರು ಮನೆಗಳು ಹಾನಿಗೊಳಗಾಗಿದ್ದವು ಮತ್ತು ಮಳೆಗಾಲದ ಆರಂಭದಲ್ಲಿ ಮನೆಗಳಲ್ಲಿ ಮತ್ತೆ ಬಿರುಕು ಕಾಣಿಸಿಕೊಳ್ಳುತ್ತಿದೆ.

ಈ ನಡುವೆ ಮಳೆ ಸೃಷ್ಟಿಸಿದ ಅವಾಂತರಕ್ಕೆ ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ, ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಈ ವರೆಗೂ 66 ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಮಂಡಿ ಪ್ರದೇಶದಲ್ಲಿ ಅತಿ ಹೆಚ್ಚು ಜನರು ಮೃತಪಟ್ಟಿದ್ದಾರೆ. ಭೂಕುಸಿತದಿಂದ ಹೆದ್ದಾರಿಗಳಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯದಲ್ಲಿ ವಿಪತ್ತು ನಿರ್ವಹಣಾ ತಂಡ ತೊಡಗಿದೆ. ಚಂಡೀಗಢ–ಶಿಮ್ಲಾ ನಡುವಿನ ರಾಷ್ಟ್ರೀಯ ಹೆದ್ದಾರಿಗಳು ಸಂಚಾರಕ್ಕೆ ಮುಕ್ತವಾಗಿದ್ದು, ರಾಜ್ಯ ಹೆದ್ದಾರಿಗಳ ತೆರವಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT