ದೇಶ

ಉತ್ತರಪ್ರದೇಶ: ಮುಸ್ಲಿಂ ಸಹಪಾಠಿಗೆ ಕಪಾಳಮೋಕ್ಷ ಮಾಡಲು ವಿದ್ಯಾರ್ಥಿಗೆ ಹೇಳಿದ್ದ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲು

Vishwanath S

ಲಖನೌ: ಮುಜಾಫರ್‌ನಗರದ ಮನ್ಸೂರ್‌ಪುರದ ಖುಬ್ಬಾಪುರ ಗ್ರಾಮದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಹೋಮ್‌ವರ್ಕ್ ಮಾಡದಿದ್ದ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಇತರ ವಿದ್ಯಾರ್ಥಿಗಳಿಗೆ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 
ಮನ್ಸೂರ್‌ಪುರ ಪೊಲೀಸ್ ಠಾಣೆ ಪೊಲೀಸರು ವೀಡಿಯೊದ ಆಧಾರದ ಮೇಲೆ ಘಟನೆಯ ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಮಧ್ಯವಯಸ್ಕ ಮಹಿಳಾ ಶಿಕ್ಷಕಿ ತರಗತಿ ವೇಳೆ ಕುರ್ಚಿಯ ಮೇಲೆ ಕುಳಿತು ತಮ್ಮ ಮುಂದೆ ನಿಂತಿರುವ ಹುಡುಗನಿಗೆ ಕೆನ್ನೆಗೆ ಹೊಡೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸುತ್ತಿದ್ದಾರೆ.
 
ಸಾಮಾಜಿಕ ಮಾಧ್ಯಮ ವರದಿಗಳ ಪ್ರಕಾರ, ಮುಸ್ಲಿಂ ಹುಡುಗನಿಗೆ ಎಂಟು ವರ್ಷವಾಗಿದ್ದು ಈ ಘಟನೆಯಿಂದ ಭಯಭೀತರಾಗಿದ್ದು ಅಳಲು ಪ್ರಾರಂಭಿಸುತ್ತಾರೆ. ವಿದ್ಯಾರ್ಥಿಯ ಸಹಪಾಠಿಗಳು ಒಬ್ಬೊಬ್ಬರಾಗಿ ಬಂದು ತಮ್ಮ ಶಿಕ್ಷಕರ ಸೂಚನೆಯ ಮೇರೆಗೆ ಅವನ ಬೆನ್ನು ಮತ್ತು ಮುಖಕ್ಕೆ ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಂಬಂಧ ಸ್ಥಳೀಯ ಖಾಸಗಿ ಶಾಲೆಯ ಶಿಕ್ಷಕಿ ತ್ರಿಪ್ತಾ ತ್ಯಾಗಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನರು ತ್ಯಾಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಿಕ್ಷಕಿಯನ್ನು ಬಂಧಿಸಬೇಕು. ಶಾಲೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೆ ಕೆಲವರು ಶಾಲೆಗೆ ಬುಲ್ಡೋಜರ್‌ ನುಗ್ಗಿಸಬೇಕು ಎಂದು ಹೇಳಿದ್ದಾರೆ.
 
ಏತನ್ಮಧ್ಯೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು(ಎನ್‌ಸಿಪಿಸಿಆರ್) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆಯನ್ನು ಪ್ರಾರಂಭಿಸಿದೆ. ಶಾಲೆಯು ತಮ್ಮ ಎಲ್ಲಾ ಪ್ರವೇಶ ಶುಲ್ಕವನ್ನು ಮರುಪಾವತಿಸಿದೆ. ತಮ್ಮ ಮಗು ಇನ್ನು ಮುಂದೆ ಈ ಶಾಲೆಯಲ್ಲಿ ಓದುವುದಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ಹೇಳಿದರು. ಶಿಕ್ಷಕರು ವಿದ್ಯಾರ್ಥಿಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಬಯಸುತ್ತಾರೆ ಎಂದು ಆರೋಪಿಸಿದ್ದಾರೆ.

SCROLL FOR NEXT