ದೇಶ

ಯುಪಿ ಶಾಲೆಯಲ್ಲಿ ಕಪಾಳಮೋಕ್ಷ ಪ್ರಕರಣ: ವಿದ್ಯಾರ್ಥಿಯ ಗುರುತು ಬಹಿರಂಗ, ಮೊಹಮ್ಮದ್ ಜುಬೈರ್ ವಿರುದ್ಧ ಎಫ್ ಐಆರ್ ದಾಖಲು 

Nagaraja AB

ಮುಜಫರ್‌ನಗರ: ಉತ್ತರ ಪ್ರದೇಶದ ಮುಜಫರ್‌ನಗರ ಜಿಲ್ಲೆಯ ಖುಬ್ಬಾಪುರ ಗ್ರಾಮದಲ್ಲಿ ಶಿಕ್ಷಕರೊಬ್ಬರ ಸೂಚನೆ ಮೇರೆಗೆ ತನ್ನ ಸಹಪಾಠಿಗೆ ಕಪಾಳಮೋಕ್ಷ ಮಾಡಿದ ಅಪ್ರಾಪ್ತ ಬಾಲಕನ ಗುರುತು ಬಹಿರಂಗಪಡಿಸಿದ ಆರೋಪದ ಮೇಲೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಾಗಿದೆ.

2015ರ ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 74ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ತಿಳಿಸಿದ್ದಾರೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಜುಬೈರ್ ಬಾಲಕನ ಗುರುತನ್ನು ಬಹಿರಂಗಪಡಿಸಿದ್ದಾರೆ ಎಂದು ದೂರುದಾರ ವಿಷ್ಣು ದತ್ ಆರೋಪಿಸಿದ್ದಾರೆ.

ಶಾಲಾ ಶಿಕ್ಷಕಿ ತ್ರಿಪ್ತಾ ತ್ಯಾಗಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡುವಂತೆ ಹೇಳುವ ವೀಡಿಯೊ ಶುಕ್ರವಾರ ವೈರಲ್ ಆಗಿತ್ತು.  ಹೋಮ್‌ವರ್ಕ್ ಮಾಡಿಲ್ಲ ಎಂದು ಮುಸ್ಲಿಂ ವಿದ್ಯಾರ್ಥಿಗೆ ತನ್ನ ಸಹಪಾಠಿ ಕಪಾಳಮೋಕ್ಷ ಮಾಡಿರುವುದು ವ್ಯಾಪಕ ಖಂಡನೆಗೆ ಕಾರಣವಾಗಿದೆ.

ಬಾಲಕನ ಕುಟುಂಬದವರು ನೀಡಿದ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಶನಿವಾರ ಪ್ರಕರಣ ದಾಖಲಿಸಲಾಗಿದೆ. ವಿಷಯಕ್ಕೆ ಕೋಮು ಬಣ್ಣ ನೀಡಲು ವೀಡಿಯೊವನ್ನು ತಿರುಚಲಾಗಿದೆ ಮತ್ತು ಅದನ್ನು ವಿದ್ಯಾರ್ಥಿಯ ಚಿಕ್ಕಪ್ಪ ಚಿತ್ರೀಕರಿಸಿದ್ದಾರೆ ಎಂದು  ತ್ಯಾಗಿ ಹೇಳಿದ್ದಾರೆ. 

SCROLL FOR NEXT