ದೇಶ

ಅಮರನಾಥ ಯಾತ್ರೆ ಮುಕ್ತಾಯ: ಈ ಬಾರಿ 4.4 ಲಕ್ಷಕ್ಕೂ ಹೆಚ್ಚು ಯಾತ್ರಿಕರಿಂದ ಶಿವಲಿಂಗ ದರ್ಶನ

Nagaraja AB

ನವದೆಹಲಿ: ಈ ವರ್ಷ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹೆ ದೇಗುಲದಲ್ಲಿ 4.4 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪ್ರಾರ್ಥನೆ ಸಲ್ಲಿಸುವುದರೊಂದಿಗೆ 62 ದಿನಗಳ ವಾರ್ಷಿಕ ಅಮರನಾಥ ಯಾತ್ರೆ ಗುರುವಾರ ಮುಕ್ತಾಯಗೊಂಡಿದೆ.

ಜುಲೈ 1 ರಂದು ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳ ಮೂಲಕ ಪ್ರಾರಂಭವಾದ ಯಾತ್ರೆಯಲ್ಲಿ ಒಟ್ಟು 4,45,338 ಭಕ್ತರು ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ 'ಶಿವಲಿಂಗ'ಕ್ಕೆ ಪೂಜೆ ಸಲ್ಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಯಾತ್ರೆಯ ಸಂದರ್ಭದಲ್ಲಿ ಯಾತ್ರಾರ್ಥಿಗಳು ಮತ್ತು ಸೇವಾ ಪೂರೈಕೆದಾರರು ಸೇರಿದಂತೆ 48 ಜನರು ಸಾವನ್ನಪ್ಪಿದ್ದಾರೆ ಮತ್ತು 62 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹವಾಮಾನ ಸಂಬಂಧಿತ ಘಟನೆಗಳು ಅಥವಾ ನೈಸರ್ಗಿಕ ಕಾರಣಗಳಿಂದ ಸಾವು ಸಂಭವಿಸಿದ್ದು, ಯಾತ್ರಿಕರ ಸಂಖ್ಯೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿದೆ. ಕಳೆದ ವರ್ಷ 3.65 ಲಕ್ಷ  ಭಕ್ತರು ಯಾತ್ರೆ ಕೈಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ. 

SCROLL FOR NEXT