ದೇಶ

ಶರದ್ ಪವಾರ್ ರಾಜಕೀಯ ಜೀವನ ಅಂತ್ಯಗೊಳಿಸಲು ಬಿಜೆಪಿ ಅಜಿತ್ ಪವಾರ್‌ಗೆ 'ಸುಪಾರಿ' ನೀಡಿದೆ: ಅನಿಲ್ ದೇಶಮುಖ್

Ramyashree GN

ಮುಂಬೈ: ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಬಿಜೆಪಿ ಸುಪಾರಿ (ಗುತ್ತಿಗೆ) ನೀಡಿದೆ ಎಂದು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶರದ್ ಪವಾರ್ ಬಣಕ್ಕೆ ಸೇರಿದ ದೇಶಮುಖ್ ಅವರು ಗುರುವಾರ ವಾರ್ಧಾದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರಕ್ಕೆ ಸೇರಿದ ನಂತರ ಜುಲೈನಲ್ಲಿ ಎನ್‌ಸಿಪಿ ವಿಭಜನೆಯಾಯಿತು.

ಭೋಪಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನಂತರ ಅಜಿತ್ ಪವಾರ್ ಮತ್ತು ಅವರ ಜೊತೆಗಿದ್ದ ಶಾಸಕರು ತರಾತುರಿಯಲ್ಲಿ ಬಿಜೆಪಿ ಮತ್ತು ಶಿವನೇನೆ ಮೈತ್ರಿಗೆ ಸೇರ್ಪಡೆಗೊಂಡರು ಎಂಬುದು ಇಡೀ ಮಹಾರಾಷ್ಟ್ರ ಮತ್ತು ಭಾರತಕ್ಕೆ ತಿಳಿದಿದೆ ಎಂದು ದೇಶಮುಖ್ ಹೇಳಿದರು.

ಎನ್‌ಸಿಪಿ ವಿಭಜನೆಯಾಗುವ ಕೆಲವು ದಿನಗಳ ಮೊದಲು, ಪಕ್ಷವು 70,000 ಕೋಟಿ ರೂ. ಗಳ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು.

'ಅವರು (ಅಜಿತ್ ಪವಾರ್) ಏಕೆ ಬೇರೆ ದಾರಿ ಹಿಡಿದರು ಎಂದು ನಿಮಗೆ ತಿಳಿದಿದೆಯೇ? ನಾನು ಅನುಭವಿಸಿದ ತೊಂದರೆಯನ್ನು ಎದುರಿಸಲು ಎನ್‌ಸಿಪಿಯ ಹಿರಿಯ ನಾಯಕರಿಗೆ ಇಷ್ಟವಿರಲಿಲ್ಲ' ಎಂದು ಆಪಾದಿತ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ಬಂಧನವನ್ನು ಉಲ್ಲೇಖಿಸಿ ದೇಶಮುಖ್ ಹೇಳಿದರು.

ಶರದ್ ಪವಾರ್ ಅವರ ರಾಜಕೀಯ ಜೀವನವನ್ನು ಮುಗಿಸಲು ಬಿಜೆಪಿ ಅಜಿತ್ ಪವಾರ್ ಅವರಿಗೆ ಸುಪಾರಿ ನೀಡಿದೆ ಎಂದು ಆರೋಪಿಸಿದರು.

ಅಜಿತ್ ಪವಾರ್ ಅವರ ಬೆಂಬಲಿಗರು ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ದೇಶಮುಖ್, ರಾಜ್ಯದ ಆಡಳಿತ ಪಕ್ಷಗಳ ಮೈತ್ರಿಯಲ್ಲಿ ಏನನ್ನು ನಿರ್ಧರಿಸಲಾಗಿದೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು.

ಆದಾಗ್ಯೂ, ಸರ್ಕಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದರಿಂದ ಅವರನ್ನು (ಅಜಿತ್ ಪವಾರ್) ಬಿಜೆಪಿ ದೂರವಿಡುತ್ತಿದೆ ಎಂದು ಅವರು ಹೇಳಿದರು.

SCROLL FOR NEXT