ದೇಶ

ಛತ್ತೀಸ್ ಗಢ ಚುನಾವಣಾ ಫಲಿತಾಂಶ: 'ಆಘಾತ, ಆಶ್ಚರ್ಯ' ಎಂದ ಕಾಂಗ್ರೆಸ್ ನಾಯಕಿ ರೇಣುಕಾ ಚೌದರಿ

Srinivasamurthy VN

ರಾಯ್ಪುರ: ತೀವ್ರ ಕುತೂಹಲ ಕೆರಳಿಸಿರುವ ಛತ್ತೀಸ್ ಗಢ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯತ್ತ ಸಾಗಿದ್ದು, ಈ ಫಲಿತಾಂಶದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ರೇಣುಕಾ ಚೌದರಿ 'ಆಘಾತಕಾರಿ ಆಶ್ಚರ್ಯ' ತಂದಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾ ಚೌದರಿ ಅವರು, ಛತ್ತೀಸ್ ಘಡದಲ್ಲಿ ಭೂಪೇಶ್ ಬಘೇಲ್ ಅವರು ತುಂಬಾ ಸ್ಥಿರರಾಗಿದ್ದರು, ಸಾಕಷ್ಟು ಕೆಲಸ ಮಾಡಿದ್ದರು. ಅನೇಕ ರಂಗಗಳಲ್ಲಿ ತಮ್ಮ ಭರವಸೆ ಪೂರ್ಣಗೊಳಿಸಿದ್ದಾರೆ. ಆದರೆ ಈ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ. ಇದು ಅಸಹ್ಯಕರ ಆಶ್ಚರ್ಯ ತಂದಿದೆ ಎಂದು ಹೇಳಿದ್ದಾರೆ.

ತೆಲಂಗಾಣ ಫಲಿತಾಂಶ ಸಂತಸ ತಂದಿದೆ
ಇನ್ನು ಇದೇ ವೇಳೆ ತೆಲಂಗಾಣ ಫಲಿತಾಂಶದ ಕುರಿತು ಸಂತಸ ಹಂಚಿಕೊಂಡಿರುವ ರೇಣುಕಾ ಚೌದರಿ ಅವರು, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 58 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಮತ್ತು ರೇವಂತ್ ರೆಡ್ಡಿ ಅವರ ನಾಯಕತ್ವ ಮತದಾರರ ಮನ ಸೆಳೆದಿದೆ ಎಂದು ಹೇಳಿದ್ದಾರೆ.

ಬಿಆರ್ಎಸ್ ನಾಯಕರು ಸಂಪರ್ಕದಲ್ಲಿ
ಮತ್ತೊಂದೆಡೆ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖಂಡರು ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ರೇಣುಕಾ ಚೌದರಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೆಲವೊಮ್ಮೆ ಅವರು ನಮ್ಮ ಜನರನ್ನು (ಶಾಸಕರನ್ನು) ಕರೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ಅವರ ನಾಯಕರು ನಮ್ಮ ಬಳಿಗೆ ಬರುತ್ತಾರೆ,'' ಎಂದು ನಗುತ್ತಲೇ ಹೇಳಿದ್ದಾರೆ.

ಇನ್ನು ಇಂದು ಪ್ರಕಟವಾಗುತ್ತಿರುವ 4 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ತೀವ್ರ ಪೈಪೋಟಿಯಿಂದ ಕೂಡಿದ್ದ ಛತ್ತೀಸ್ ಘಡದಲ್ಲಿ ಇದೀಗ ಬಿಜೆಪಿ ಕಮಾಲ್ ಮಾಡುತ್ತಿದ್ದು ತನ್ನ ಅಂತರವನ್ನು ಭಾರಿ ಸಂಖ್ಯೆಯಲ್ಲಿ ಹೆಚ್ಚಿಸಿಕೊಂಡಿದೆ. ಚುನಾವಣಾ ಆಯೋಗದಿಂದ ಬಂದ ಇತ್ತೀಚಿನ ಮಾಹಿತಿಯ ಪ್ರಕಾರ, ಛತ್ತೀಸ್‌ಗಢದಲ್ಲಿ ಬಿಜೆಪಿಯು ಆಡಳಿತಾರೂಢ ಕಾಂಗ್ರೆಸ್‌ ಅನ್ನು ಹಿಂದಿಕ್ಕಿ 90 ವಿಧಾನಸಭಾ ಸ್ಥಾನಗಳ ಪೈಕಿ 54 ರಲ್ಲಿ ಮುನ್ನಡೆ ಸಾಧಿಸಿದ್ದು, ಹಳೆಯ ಪಕ್ಷ ಕಾಂಗ್ರೆಸ್ ಪಕ್ಷದ ಸ್ಥಾನ ಗಳಿಕೆ 34ಕ್ಕೆ ಕುಸಿದಿದೆ. ಇಲ್ಲಿಯೂ ಬಿಜೆಪಿ ಸರ್ಕಾರ ರಚಿಸುವತ್ತ ದಾಪುಗಾಲಿರಿಸಿದೆ. 

SCROLL FOR NEXT