ದೇಶ

ಸಿಬಿಐ ಕೇಸಿನಲ್ಲಿ ಕಾಂಗ್ರೆಸ್ ನನ್ನನ್ನು ಜೈಲಿಗೆ ಕಳುಹಿಸಿತು, ಆ ಸಮಯ ಅತ್ಯಂತ ಕಠಿಣವಾಗಿತ್ತು: ಅಮಿತ್ ಶಾ

Sumana Upadhyaya

ಅಹಮದಾಬಾದ್‌: ಸೊಹ್ರಾಬುದ್ದೀನ್‌ ಶೇಖ್‌ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ತನಿಖಾ ಸಂಸ್ಥೆಯು 2010ರಲ್ಲಿ ತಮ್ಮನ್ನು ಬಂಧಿಸಿದ ಘಟನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೆನಪಿಸಿಕೊಂಡಿದ್ದಾರೆ. 

ಕಾಂಗ್ರೆಸ್‌ ನನ್ನನ್ನು ಸಿಬಿಐ ಪ್ರಕರಣದಲ್ಲಿ ಜೈಲಿಗೆ ಕಳುಹಿಸಿತ್ತು, ಆ ಸಮಯ ನನಗೆ ಸ್ವಾಭಾವಿಕವಾಗಿ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. ಗುಜರಾತ್ ನ ಜುನಾಗಢ್‌ನಲ್ಲಿ ದಿವಂಗತ ಸಚಿವ ದಿವ್ಯಕಾಂತ್ ನಾನಾವತಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮಿತ್ ಶಾ ಅವರು ಆಗಮಿಸಿದ್ದ ವೇಳೆ ಈ ಮಾತುಗಳನ್ನು ಹೇಳಿದ್ದಾರೆ. 

2010 ರಿಂದ ನಂತರದ ದಿನಗಳನ್ನು ನೆನಪಿಸಿಕೊಂಡ ಅವರು, “ಕಾಂಗ್ರೆಸ್ ನನ್ನನ್ನು ಸಿಬಿಐ ಪ್ರಕರಣದಲ್ಲಿ ಜೈಲಿಗೆ ಕಳುಹಿಸಿತು. ಆ ದಿನಗಳು ನನಗೆ ಸಹಜವಾಗಿ ಕಠಿಣ ಪರಿಸ್ಥಿತಿಯ ದಿನಗಳಾಗಿದ್ದವು. ಜೈಲು ಸೇರುವ ಐದು ನಿಮಿಷಗಳ ಮೊದಲು ನಾನು ಕಾರಾಗೃಹ ಇಲಾಖೆಯ ಮಂತ್ರಿಯಾಗಿದ್ದೆ. ಯಾವುದೇ ವ್ಯಕ್ತಿಯನ್ನು ಭೂಮಿಗೆ ಇಳಿಸಲು ಭಗವಂತ ಇದಕ್ಕಿಂತ ದೊಡ್ಡ ಕಠಿಣ ಸ್ಥಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ತನಿಖಾ ಸಂಸ್ಥೆ ಅಂದು ಬಂಧಿಸಿದ ದಿನಗಳ ಬಗ್ಗೆ ಹೇಳಿಕೊಂಡರು.

1950 ರ ದಶಕದಲ್ಲಿ ಕೌನ್ಸಿಲರ್ ಮತ್ತು ಸ್ಥಳೀಯ ನಾಗರಿಕ ಸಂಸ್ಥೆಯ ಅಧ್ಯಕ್ಷರಾಗಿ ಜುನಾಗಢಕ್ಕೆ ನೀಡಿದ ಕೊಡುಗೆಗಾಗಿ ಅಮಿತ್ ಶಾ ಅವರು ನಾನಾವತಿಯನ್ನು ಶ್ಲಾಘಿಸಿದರು. ದಿವಂಗತ ನಾನಾವತಿ ಅವರು ಅಂದು ಕಾಂಗ್ರೆಸ್ ಶಾಸಕರಾಗಿದ್ದರು. ಅವರು ಚಿಮನ್‌ಭಾಯ್ ಪಟೇಲ್ ನೇತೃತ್ವದ ಸರ್ಕಾರದಲ್ಲಿ ಕಾನೂನು, ಪುರಸಭೆ, ಪಟ್ಟಣ ಯೋಜನೆ ಮತ್ತು ನಗರಾಭಿವೃದ್ಧಿ ಇಲಾಖೆಯ ಸಂಪುಟ ಸಚಿವರಾಗಿದ್ದರು. 

ಅವರ ಪುತ್ರ ಗಾಗೂ ಹೈಕೋರ್ಟ್ ನ ಹಿರಿಯ ವಕೀಲ ನಿರುಪಮ್ ನಾನಾವತಿ ಅವರ ಬಗ್ಗೆಯೂ ಈ ಸಂದರ್ಭದಲ್ಲಿ ಅಮಿತ್ ಶಾ ಪ್ರಸ್ತಾಪಿಸಿದರು. ಹೈಕೋರ್ಟ್ ವಕೀಲ ನಾನಾವತಿ ಅವರು ಕಾಂಗ್ರೆಸ್ ಜೊತೆ ಒಡನಾಟವಿದ್ದರೂ ತಮ್ಮ ಪರ ನಿಂತು ಕೇಸ್ ಗೆಲ್ಲಲು ಸಹಕರಿಸಿದರು ಎಂದು ಹೇಳಿದರು. 

SCROLL FOR NEXT