ದೇಶ

ಮಧ್ಯ ಪ್ರದೇಶ: 2018ಕ್ಕಿಂತ ಈ ಬಾರಿ ಶೇ 7 ರಷ್ಟು ಹೆಚ್ಚು ಮತ ಪಡೆದ ಬಿಜೆಪಿ; ಕಾಂಗ್ರೆಸ್ ಮತ ಹಂಚಿಕೆ ಕುಸಿತ!

Ramyashree GN

ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 48.55 ರಷ್ಟು ಮತಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವನ್ನು ಸಾಧಿಸಿದೆ. ಇದು 2018ಕ್ಕೆ ಹೋಲಿಸಿದರೆ ಶೇ 7 ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದೆ. ಇದು ರಾಜ್ಯ ರಾಜಕೀಯದಲ್ಲಿ ಕೇಸರಿ ಪಕ್ಷದ ಸ್ಥಾನ ಭದ್ರಪಡಿಸಲು ಕಾರಣವಾಗಿದೆ.

2018ರ ಚುನಾವಣೆಯಲ್ಲಿ ಕೇಸರಿ ಪಕ್ಷವು ಶೇ 41.02ರಷ್ಟು ಮತಗಳನ್ನು ಪಡೆದಿತ್ತು.

ಬಿಜೆಪಿ ಭಾನುವಾರ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಗಳಿಸಿತು. ವಿಧಾನಸಭೆಯ 230 ಸ್ಥಾನಗಳಲ್ಲಿ 163 ಸ್ಥಾನಗಳನ್ನು ಗೆದ್ದಿತು, ಕಾಂಗ್ರೆಸ್ 66 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕಾಂಗ್ರೆಸ್‌ನ ಮತ ಹಂಚಿಕೆ ಪ್ರಮಾಣವು 2018ಕ್ಕೆ ಹೋಲಿಸಿದರೆ ಶೇ 40.89 ರಿಂದ ಶೇ 40.40ಕ್ಕೆ ಕುಸಿದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಈ ಬಾರಿ ಕೇವಲ 66ಕ್ಕೆ ತೃಪ್ತಿಪಟ್ಟುಕೊಂಡಿದೆ.

ಆದಾಗ್ಯೂ, ಶೇ 7 ಕ್ಕಿಂತ ಹೆಚ್ಚು ಮತಗಳನ್ನು ಹೆಚ್ಚು ಪಡೆದಿರುವುದು ಬಿಜೆಪಿಗೆ ಲಾಭವಾಗಿದ್ದು, 2018 ರಲ್ಲಿ 109 ಸ್ಥಾನಗಳಿಂದ ಈ ಬಾರಿ 163 ಸ್ಥಾನಗಳಲ್ಲಿ ವಿಜಯ ಸಾಧಿಸಲು ನೆರವಾಗಿದೆ.

2003ರಲ್ಲಿ ಬಿಜೆಪಿ ಶೇ 42.50ರಷ್ಟು ಮತಗಳನ್ನು ಪಡೆದು 173 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಶೇ 31.6ರಷ್ಟು ಮತಗಳಿಕೆಯೊಂದಿಗೆ 38 ಸ್ಥಾನಗಳನ್ನು ಪಡೆದಿತ್ತು. 

2008ರಲ್ಲಿ 143 ಸ್ಥಾನಗಳೊಂದಿಗೆ ಬಿಜೆಪಿಯ ಮತಗಳಿಕೆ ಶೇ 37.64 ರಷ್ಟು ಇತ್ತು. ಕಾಂಗ್ರೆಸ್‌ಗೆ 71 ಸ್ಥಾನಗಳೊಂದಿಗೆ ಶೇ 32.39 ರಷ್ಟು ಮತಗಳನ್ನು ಪಡೆದಿತ್ತು.

ಕೇಸರಿ ಪಕ್ಷವು 2013 ರಲ್ಲಿ ಶೇ 44.88 ರಷ್ಟು ಮತ ಹಂಚಿಕೆಯಲ್ಲಿ 165 ಸ್ಥಾನಗಳನ್ನು ಪಡೆದುಕೊಂಡಿತು ಮತ್ತು ಶೇ 36.38 ರಷ್ಟು ಮತ ಹಂಚಿಕೆಯೊಂದಿಗೆ ಕಾಂಗ್ರೆಸ್ 58 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. 

2018ರಲ್ಲಿ ಬಿಜೆಪಿ ಶೇ 41.02 ಮತಗಳನ್ನು ಪಡೆದು 109 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಶೇ 40.89 ಮತ ಹಂಚಿಕೆಯೊಂದಿಗೆ 114 ಸ್ಥಾನಗಳೊಂದಿಗೆ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿತ್ತು.

SCROLL FOR NEXT