ತಿರುವನಂತಪುರಂ: ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ದಲಿತ ಚಿಂತಕ ಎಂ. ಕುನ್ಹಮಾನ್ ಅವರ 74 ನೇ ಹುಟ್ಟುಹಬ್ಬದ ದಿನವಾದ ಭಾನುವಾರ ಸಂಜೆ ಶ್ರೀಕಾರ್ಯಂ ಬಳಿಯ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವೆಂಚವೋಡು ಎಂಬಲ್ಲಿ ಒಂಟಿಯಾಗಿ ವಾಸವಾಗಿದ್ದ ಕುನ್ಹಮಾನ್ ಅವರ ನಿವಾಸದ ಅಡುಗೆ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಶಕ್ತ ದಲಿತ ಧ್ವನಿಯಾಗಿದ್ದ ಮತ್ತು ಭೂ ಹಂಚಿಕೆ, ಕೃಷಿ ವಿಷಯಗಳ ಬಗ್ಗೆ ಪ್ರಸಿದ್ಧ ವಿದ್ವಾಂಸರಾಗಿದ್ದ ಕುನ್ಹಮಾನ್ ಭೇಟಿ ಮಾಡಲು ಅವರ ಸ್ನೇಹಿತ ಮತ್ತು ಸಾಮಾಜಿಕ ಕಾರ್ಯಕರ್ತ ಕೆ ಎಂ ಶಾಜಹಾನ್ ಬಂದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಶಾಜಹಾನ್ ಶನಿವಾರ ಕುನ್ಹಮಾನ್ ಅವರಿಗೆ ಶುಭ ಕೋರಲು ಫೋನ್ ಮಾಡಿದ್ದಾರೆ. ಆದರೆ, ಫೋನ್ ರಿಸೀವ್ ಮಾಡದ ಕಾರಣ ಶಾಜಹಾನ್ ಭಾನುವಾರ ಬಂದಿದ್ದು, ಅವರ ಕರೆಗಳಿಗೆ ಪ್ರತಿಕ್ರಿಯಿಸದ ಕಾರಣ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಗಿಲು ತೆರೆದಾಗ ಅವರು ಸಾವನ್ನಪ್ಪಿರುವುದು ಕಂಡುಬಂದಿದೆ.
ಇಂದು ನಡೆಯಲಿರುವ ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಹಿಂದಿನ ನಿಖರವಾದ ಕಾರಣವನ್ನು ಬಹಿರಂಗಪಡಿಸಲಾಗುವುದು ಎಂದು ಶ್ರೀಕಾರ್ಯಂ ಪೊಲೀಸರು ತಿಳಿಸಿದ್ದಾರೆ.