ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಕೊಠಡಿಗೆ ಜಿಗಿದು ಹಳದಿ ಬಣ್ಣದ ಅನಿಲ ಹೊರಸೂಸುವ ಕ್ಯಾನ್ ನ್ನು ಹೊತ್ತೊಯ್ದ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿ ಬಂಧಿಸಿರುವುದು 
ದೇಶ

ಲೋಕಸಭೆಯಲ್ಲಿ ಭದ್ರತಾ ಲೋಪ: ಆರೋಪಿಗಳ ವಿರುದ್ಧ ಯುಎಪಿಎ ಅಡಿ ಕೇಸು ದಾಖಲು, ಸಂಸತ್ತು ಆವರಣದಲ್ಲಿ ಬಿಗಿ ಭದ್ರತೆ

ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಒಳನುಗ್ಗಿ ಗೊಂದಲ ವಾತಾವರಣ ಸೃಷ್ಟಿಸಿ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನವದೆಹಲಿ: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಒಳನುಗ್ಗಿ ಗೊಂದಲ ವಾತಾವರಣ ಸೃಷ್ಟಿಸಿ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

2001 ರ ಸಂಸತ್ತಿನ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ನಿನ್ನೆ ಬುಧವಾರ ನಡೆದ ಪ್ರಮುಖ ಭದ್ರತಾ ಉಲ್ಲಂಘನೆಯಲ್ಲಿ, ಇಬ್ಬರು ವ್ಯಕ್ತಿಗಳು - ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ - ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು, ಡಬ್ಬಿಗಳಿಂದ ಹಳದಿ ಅನಿಲವನ್ನು ಸೂಸುತ್ತಾ ಘೋಷಣೆಗಳನ್ನು ಕೂಗಿದರು. ಈ ವೇಳೆ ಸ್ಥಳದಲ್ಲಿ ಭಾರೀ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. 

ಅದೇ ಸಮಯದಲ್ಲಿ, ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಎಂಬುವವರು ಸಂಸತ್ತಿನ ಆವರಣದ ಹೊರಗೆ "ತನಾಶಾಹಿ ನಹೀ ಚಲೇಗಿ" ಎಂದು ಕೂಗುತ್ತಾ ಡಬ್ಬಿಗಳಿಂದ ಹಳದಿ ಬಣ್ಣದ ಅನಿಲವನ್ನು ಸಿಂಪಡಿಸಿದರು. ಈ ನಾಲ್ವರು ಸಂಸತ್ತಿಗೆ ಪ್ರವೇಶಿಸಿ ದಾಂಧಲೆ ನಡೆಸಲು ಕೆಲ ಸಮಯಗಳ ಮೊದಲೇ ಯೋಜಿಸಿದ ಆರು ಜನರ ಗುಂಪಿನ ಭಾಗವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ಆರೋಪಿ ಮತ್ತೊಬ್ಬ: ಬುಧವಾರ ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಪ್ರಮುಖ ಪಿತೂರಿಕೋರ ಬೇರೊಬ್ಬರು ಎಂದು ಪ್ರಾಥಮಿಕ ತನಿಖೆಯ ಪ್ರಕಾರ ಪೊಲೀಸ್ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಆರೋಪಿಗಳು ಸಂಸತ್ತಿನ ಹೊರಗೆ ಹಲವು ದಿನಗಳಿಂದ ಪೂರ್ವಾಭ್ಯಾಸ ನಡೆಸಿದ್ದರು. ಎಲ್ಲಾ ಆರೋಪಿಗಳು 'ಭಗತ್ ಸಿಂಗ್ ಫ್ಯಾನ್ ಕ್ಲಬ್' ಎಂಬ ಸಾಮಾಜಿಕ ಮಾಧ್ಯಮ ಪುಟದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ಉಲ್ಲೇಖಿಸಿವೆ.

ಸುಮಾರು ಒಂದೂವರೆ ವರ್ಷಗಳ ಹಿಂದೆ ಎಲ್ಲರೂ ಮೈಸೂರಿನಲ್ಲಿ ಭೇಟಿಯಾಗಿದ್ದಾರೆ. ಜುಲೈನಲ್ಲಿ ಸಾಗರ್ ಲಕ್ನೋದಿಂದ ಬಂದಿದ್ದನು. ಆದರೆ ಸಂಸತ್ ಭವನವನ್ನು ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಡಿಸೆಂಬರ್ 10 ರಂದು ಎಲ್ಲರೂ ತಮ್ಮ ತಮ್ಮ ರಾಜ್ಯಗಳಿಂದ ದೆಹಲಿ ತಲುಪಿದ್ದರು. ನಂತರ ಇಂಡಿಯಾ ಗೇಟ್ ಬಳಿ ಒಟ್ಟು ಸೇರಿ ಬಣ್ಣದ ಪಟಾಕಿಗಳನ್ನು ಖರೀದಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಗೃಹ ವ್ಯವಹಾರಗಳ ಸಚಿವಾಲಯ ಬುಧವಾರ ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ಲೋಕಸಭಾ ಸಚಿವಾಲಯದ ಕೋರಿಕೆಯ ಮೇರೆಗೆ, ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ತನಿಖೆಗೆ ಗೃಹ ಸಚಿವಾಲಯ ಆದೇಶಿಸಿದೆ. ಸಿಆರ್‌ಪಿಎಫ್‌ನ ಡಿಜಿ ಅನೀಶ್ ದಯಾಳ್ ಸಿಂಗ್ ಅವರ ನೇತೃತ್ವದಲ್ಲಿ ಇತರ ಭದ್ರತಾ ಏಜೆನ್ಸಿಗಳು ಮತ್ತು ತಜ್ಞರೊಂದಿಗೆ ತನಿಖಾ ಸಮಿತಿಯನ್ನು ರಚಿಸಲಾಗಿದ ಎಂದು ಗೃಹ ಸಚಿವಾಲಯ ತಿಳಿಸಿದೆ.

ಸ್ಮಾರ್ಟ್ ಕಾರ್ಡು ಬಳಸಲು ಸೂಚನೆ: ನಿನ್ನೆ ನಡೆದ ಭದ್ರತಾ ಲೋಪ ಘಟನೆ ಬಳಿಕ ಹೊಸ ಕಟ್ಟಡವನ್ನು ಪ್ರವೇಶಿಸಲು ತಮ್ಮ 'ಸ್ಮಾರ್ಟ್ ಕಾರ್ಡ್'ಗಳನ್ನು ಸಿದ್ಧಪಡಿಸುವಂತೆ ಲೋಕಸಭೆಯ ಸೆಕ್ರೆಟರಿಯೇಟ್ ಬುಧವಾರ ಸಂಸದರಿಗೆ ಸೂಚಿಸಿದ್ದಾರೆ. 
ಕಟ್ಟಡದ ಗೇಟ್‌ಗಳು, ಲೋಕಸಭೆ ಮತ್ತು ರಾಜ್ಯಸಭೆಯ ಲಾಬಿಗಳು ಮತ್ತು ಇತರ ಕೆಲವು ಸ್ಥಳಗಳಲ್ಲಿ ಮುಖ ಗುರುತಿಸುವಿಕೆ ವ್ಯವಸ್ಥೆಯ ಸಹಾಯದಿಂದ ಸಂಸತ್ ಭವನಕ್ಕೆ ಪ್ರವೇಶವನ್ನು ಸುಗಮಗೊಳಿಸಲಾಗುತ್ತಿದೆ. 

ಹಲವಾರು ಸದಸ್ಯರು ಸ್ಮಾರ್ಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ಸಂದರ್ಶಕರ ನಿರ್ವಹಣಾ ವ್ಯವಸ್ಥೆಗೆ ನೋಂದಾಯಿಸದಿರುವವರು ಹಾಗೆ ಮಾಡಬೇಕು ಎಂದು ಸಚಿವಾಲಯ ತಿಳಿಸಿದೆ. ಸೂಚನೆಗಳ ಕುರಿತು ಕಾರ್ಯನಿರ್ವಾಹಕರೊಬ್ಬರು ಕೇಳಿದಾಗ, ಇದೇನು ಹೊಸ ಆದೇಶವಲ್ಲ, ಹಲವು ದಿನಗಳಿಂದ ನೀಡಲಾಗುತ್ತಿದೆ ಎಂದರು.

ಸಂಸತ್ತು ಹೊರಗೆ ಭಾರೀ ಭದ್ರತೆ: ನಿನ್ನೆಯ ಘಟನೆ ಬಳಿಕ ದೆಹಲಿಯ ಸಂಸತ್ತು ಭವನ ಹೊರಗೆ ಇಂದು ಭಾರೀ ಭದ್ರತೆ ಏರ್ಪಡಿಸಲಾಗಿದೆ. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಆವರಣ ಪ್ರವೇಶಿಸುವ ಪ್ರತಿ ವಾಹನಗಳನ್ನು ತಪಾಸಣೆ ಮಾಡಿ ಒಳಗೆ ಕಳುಹಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT