ದೇಶ

ಸಂಸತ್ ಭದ್ರತಾ ಲೋಪ: ಚುರುಕುಗೊಂಡ ತನಿಖೆ, ಸಂಸತ್ತಿನೆದುರು ಬೆಂಕಿ ಹಚ್ಚಿಕೊಳ್ಳಲು ಯೋಜನೆ ರೂಪಿಸಿದ್ದ ಆರೋಪಿ!

Manjula VN

ನವದೆಹಲಿ: ಸಂಸತ್‌ ಭವನದಲ್ಲಿ ಕಿಡಿಗೇಡಿಗಳು ಹೊಗೆ ಬಣ್ಣಮಿಶ್ರಿತ ಹೊಗೆ ದಾಳಿ ನಡೆಸಿದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಈ ಪ್ರಕರಣದ ಅಡಿಯಲ್ಲಿ ಈಗಾಗಲೇ ಒಟ್ಟು 5 ಮಂದಿ ಆರೋಪಿಗಳನ್ನು ದೆಹಲಿ ಪೊಲೀಸ್‌ ವಿಶೇಷ ತನಿಖಾ ತಂಡ ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದೆ.

ವಿಚಾರಣೆ ವೇಳೆ ಆರೋಪಿ ಸಾಗರ್ ಶರ್ಮಾ ತನಾನು ಸಂಸತ್ತಿನ ಹೊರಗೆ ಬೆಂಕಿ ಹಚ್ಚಿಕೊಳ್ಳಲು ಹಾಗೂ ಕರಪತ್ರಗಳನ್ನು  ವಿತರಿಸಿ ಸರ್ಕಾರಕ್ಕೆ ಸಂದೇಶ ರವಾನಿಸಲು ತೀರ್ಮಾನಿಸಿದ್ದೆ ಎಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.

ಮೊದಲು ಬೆಂಕಿ ಹಚ್ಚಿಕೊಳ್ಳಲು ಬಯಸಿದ್ದೆ. ಇದಕ್ಕಾಗಿ ಜೆಲ್​ ಒಂದನ್ನು ಆನ್​ಲೈನ್​ನಲ್ಲಿ ಆರ್ಡರ್ ಮಾಡಲು ಬಯಸಿದ್ದೆ ಈ ಜೆಲ್​ ಅನ್ನು ದೇಹದ ಮೇಲೆ ಹಚ್ಚಿಕೊಳ್ಳುವ ಮೂಲಕ ಬೆಂಕಿಯಿಂದ ರಕ್ಷಣೆ ಪಡೆಯಬಹುದು, ಆದರೆ ಆನ್​ಲೈನ್​ ಹಣ ಪಾವತಿ ಸಾಧ್ಯವಾಗಿರಲಿಲ್ಲ, ಹೀಗಾಗಿ ಜೆಲ್ ಖರೀದಿಸಲಾಗಲಿಲ್ಲ, ನಂತರ ಯೋಜನೆಯನ್ನು ಕೈಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾನೆ.

ಈ  ನಡುವೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ದೆಹಲಿ ಪೊಲೀಸರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಎಲ್ಲೆಲ್ಲಿ ಸಂಚು ರೂಪಿಸಲಾಗಿತ್ತು ಎಂಬುದರ ಕುರಿತು ಮಾಹಿತಿ ಕಲೆಹಾಕಲು ತನಿಖಾಧಿಕಾರಿಗಳು ಶುಕ್ರವಾರ ತಡರಾತ್ರಿ ಆರೋಪಿಗಳನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದಿದ್ದರು ಎಂದು ತಿಳಿದುಬಂದಿದೆ.

ಏತನ್ಮಧ್ಯೆ ಭದ್ರತಾ ಲೋಪ ಉಲ್ಲಂಘನೆಯನ್ನು ಮರುಸೃಷ್ಟಿಸಲು ಪೊಲೀಸರು ಸಂಸತ್ತಿನ ಅನುಮತಿಯನ್ನು ಪಡೆಯಲು ಚಿಂತನೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

2001ರ ಡಿ. 13ರಂದು ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದ ದಿನವಾದ ಬುಧವಾರ ಸಾಗರ್ ಶರ್ಮಾ ಮತ್ತು ಡಿ. ಮನೋರಂಜನ್, ಶೂನ್ಯ ಅವಧಿಯ ಚರ್ಚೆಯ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಲೋಕಸಭೆ ಚೇಂಬರ್‌ಗೆ ಜಿಗಿದು ಕ್ಯಾನಿಸ್ಟರ್‌ಗಳಿಂದ ಹಳದಿ ಬಣ್ಣದ ಹೊಗೆ ಸಿಡಿಸಿದ್ದರು. ಈ ವೇಳೆ ಜೋರಾಗಿ ಘೋಷಣೆಗಳನ್ನು ಕೂಗಿದ್ದರು. ಅವರನ್ನು ಕೆಲವು ಸಂಸದರು ಹಿಡಿದು ಥಳಿಸಿದ್ದರು.

ಇದೇ ಸಮಯಕ್ಕೆ ಅಮೋಲ್ ಮತ್ತು ನೀಲಂ ಇಬ್ಬರೂ ಸಂಸತ್‌ನ ಹೊರಗಿನ ಟ್ರಾನ್ಸ್‌ಪೋರ್ಟ್ ಭವನದ ಬಳಿ ಬಣ್ಣದ ಹೊಗೆ ಸಿಡಿಸಿ ಪ್ರತಿಭಟನೆ ನಡೆಸಿದ್ದರು. ಐದನೇ ಆರೋಪಿ ಲಲಿತ್ ಝಾ ಅವರು ಸಂಸತ್ ಹೊರಗೆ ನಡೆದ ಪ್ರತಿಭಟನೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದ.

ಇನ್ನು ಲಲಿತ್ ಝಾ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಮಹೇಶ್ ಕುಮ್ವತ್ ಮತ್ತು ಕೈಲಾಶ್ ಅವರಿಗೆ ತನಿಖಾಧಿಕಾರಿಗಳು ಕ್ಲೀನ್ ಚಿಟ್ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಘಟನೆ ಬಳಿಕ ಲಲಿತ್ ಝಾ ರಾಜಸ್ಥಾನದ ನಾಗೌರ್‌ನಲ್ಲಿ ತಲೆಮರೆಸಿಕೊಂಡಿದ್ದು, ಅಲ್ಲಿ ಮೊಬೈಲ್ ಫೋನ್ ಗಳನ್ನು ನಾಶಪಡಿಸಿದ್ದ ಎಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ನಾಗೌರ್'ಗೆ ಕರೆದೊಯ್ದು ತಪಾಸಣೆ ನಡೆಸಲಿದ್ದಾರೆಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

SCROLL FOR NEXT