ದೇಶ

INDIA ಸಭೆ: ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಲಿ ಎಂದ ದೀದಿ; ಸಂಸದರ ಅಮಾನತಿಗೆ ಖಂಡನೆ, ಡಿ.22 ರಂದು ದೇಶಾದ್ಯಂತ ಪ್ರತಿಭಟನೆ

Lingaraj Badiger

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಹೇಳಿದ್ದಾರೆ.

ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ INDIA ಮೈತ್ರಿಕೂಟದ ನಾಲ್ಕನೇ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಲಿ ಎಂಬ ಪ್ರಸ್ತಾಪ ಮಾಡಿದರು. ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಈ ಪ್ರಸ್ತಾಪಕ್ಕೆ ಬೆಂಬಲ ನೀಡಿದರು.

ಮಮತಾ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯ. ಗೆದ್ದ ನಂತರ ಪ್ರಧಾನಿ ಬಗ್ಗೆ ನಿರ್ಧಾರ ಮಾಡೋಣ ಎಂದು ಹೇಳಿರುವುದಾಗಿ ವರದಿಯಾಗಿದೆ.

ಲೋಕಸಭೆ ಚುನಾವಣೆ ಮುಗಿಯುವವರೆಗೆ ಇಂಡಿಯಾ ಮೈತ್ರಿಕೂಟ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ ಎಂದು ನಿನ್ನೆಯಷ್ಟೇ ಹೇಳಿದ್ದ ಮಮತಾ ಬ್ಯಾನರ್ಜಿ, ಇಂದು ಆ ಸ್ಥಾನಕ್ಕೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಸ್ತಾಪಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇನ್ನು ಇಂಡಿಯಾ ಮೈತ್ರಿಕೂಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಖರ್ಗೆ ಅವರು, ಇಂಡಿಯಾ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ನಮಗೆ ಮೊದಲು ಸಂಸದರು ಗೆಲ್ಲುವುದು ಮುಖ್ಯ. ಸಂಸದರು ಗೆದ್ದು ಬಂದ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬಹುದು ಎಂಬುದರ ಕುರಿತು ಚರ್ಚಿಸುತ್ತೇವೆ. ಮೊದಲು ಮೈತ್ರಿಕೂಟದ ಸಂಸದರು ಗೆದ್ದು ಬರಲಿ. ಆಮೇಲೆ ನೋಡೋಣ ಎಂದರು.

ಸಭೆಯಲ್ಲಿ ಪ್ರತಿಪಕ್ಷಗಳ ಸಂಸದರ ಅಮಾನತನ್ನು ತೀವ್ರವಾಗಿ ಖಂಡಿಸಲಾಯಿತು ಮತ್ತು ಅಮಾನತು ಖಂಡಿಸಿ ಡಿಸೆಂಬರ್ 22 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಖರ್ಗೆ ತಿಳಿಸಿದರು.

SCROLL FOR NEXT