ದೇಶ

ಸಂಸದರನ್ನು ಸದನದಿಂದ ಹೊರಹಾಕಿದ ಬಗ್ಗೆ ಏಕೆ ಚರ್ಚೆಯಾಗುತ್ತಿಲ್ಲ: ರಾಹುಲ್ ಗಾಂಧಿ ಪ್ರಶ್ನೆ

Ramyashree GN

ನವದೆಹಲಿ: ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣಕಿಸಿ, ಸಂಭ್ರಮಿಸಿದ ವಿವಾದದ ನಡುವೆ, ಸಂಸತ್ತಿನ ಹೊರಗೆ ಸಂಸದರು ಕುಳಿತಿರುವುದನ್ನು ತಮ್ಮ ಫೋನಿನಲ್ಲಿ ಚಿತ್ರೀಕರಿಸಿದ್ದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದು, ಸದನದಿಂದ ಸಂಸದರನ್ನು 'ಹೊರಹಾಕಿರುವ' ಬಗ್ಗೆ ಏಕೆ ಚರ್ಚೆಗಳು ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 

ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಮಂಗಳವಾರ ಸಂಸತ್ತಿನ ಮೆಟ್ಟಿಲುಗಳ ಮೇಲೆ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯ ವೇಳೆ ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ಧನಕರ್ ಅವರನ್ನು ಅಣಕಿಸಿದ್ದರು. ನಂತರ ಇದು ಭಾರಿ ರಾಜಕೀಯ ಗದ್ದಲಕ್ಕೆ ಕಾರಣವಾಯಿತು ಮತ್ತು ಆಡಳಿತಾರೂಢ ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸಿದೆ.

ಬ್ಯಾನರ್ಜಿಯವರು ಧನಕರ್ ಅವರ ರೀತಿಯಲ್ಲಿ ಅಭಿನಯಿಸುತ್ತಿರುವ ವಿಡಿಯೋವನ್ನು ರಾಹುಲ್ ಗಾಂಧಿ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿರುವುದು ಕಂಡುಬಂದಿತ್ತು.

ವಿಡಿಯೋ ಮಾಡಿದ್ದು ಉಪರಾಷ್ಟ್ರಪತಿಗೆ ಅವಮಾನ ಮಾಡಿದ ಹಾಗೆ ಎಂಬುದಕ್ಕೆ ಉತ್ತರಿಸಿದ ಅವರು, 'ಯಾರು, ಹೇಗೆ ಅವಮಾನ ಮಾಡಿದ್ದಾರೆ?, ಸಂಸದರು ಕುಳಿತಿದ್ದರು, ಅವರ ವಿಡಿಯೋವನ್ನು ನನ್ನ ಫೋನಿನಲ್ಲಿ ಚಿತ್ರೀಕರಿಸಿದ್ದೇನೆ. ಮಾಧ್ಯಮಗಳು ಅದನ್ನು ತೋರಿಸುತ್ತಲೇ ಇರುತ್ತವೆ ಮತ್ತು ಟೀಕೆ ಮಾಡುತ್ತಲೇ ಇರುತ್ತವೆ. ಮೋದಿ ಜಿ ಟೀಕೆಗಳನ್ನು ಮಾಡುತ್ತಿದ್ದಾರೆ, ಆದರೆ ಯಾರೂ ಏನನ್ನೂ ಹೇಳಲಿಲ್ಲ' ಎಂದಿದ್ದಾರೆ.

'ನಮ್ಮ 150 ಸಂಸದರನ್ನು ಸದನದಿಂದ ಹೊರಹಾಕಲಾಗಿದೆ ಮತ್ತು ಮಾಧ್ಯಮಗಳಲ್ಲಿ ಅದರ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ. ಅದಾನಿ ಮತ್ತು ರಫೇಲ್ ಬಗ್ಗೆಯೂ ಯಾವುದೇ ಚರ್ಚೆಯಾಗುತ್ತಿಲ್ಲ. ತನಿಖೆಗೆ ಅವಕಾಶವಿಲ್ಲ ಎಂದು ಫ್ರಾನ್ಸ್ ಹೇಳಿದೆ. ಅದರ ಬಗ್ಗೆಯೂ ಯಾವುದೇ ಚರ್ಚೆ ಇಲ್ಲ. ನಿರುದ್ಯೋಗದ ಬಗ್ಗೆ ಯಾವುದೇ ಚರ್ಚೆ ಇಲ್ಲ, ಸದನದಿಂದ ಅಮಾನತುಗೊಂಡಿರುವ ಬಗ್ಗೆ ನಮ್ಮ ಸಂಸದರು ದುಃಖಿತರಾಗಿದ್ದಾರೆ, ಆದರೆ, ನೀವು ಬೇರೆಯದನ್ನೇ ಚರ್ಚಿಸುತ್ತಿದ್ದೀರಿ' ಎಂದು ಅವರು ಹೇಳಿದರು.

ಮಾಧ್ಯಮಗಳು ಕೆಲವು ಸುದ್ದಿಗಳನ್ನು ತೋರಿಸಬೇಕಾಗಿರುತ್ತದೆ ಮತ್ತು ಅದು ಅವುಗಳ ಜವಾಬ್ದಾರಿಯಾಗಿರುತ್ತದೆ ಎಂದು ರಾಹುಲ್ ಗಾಂಧಿ ಒತ್ತಿ ಹೇಳಿದರು.

SCROLL FOR NEXT