ದೇಶ

ನ್ಯೂಸ್‌ಕ್ಲಿಕ್ ಪ್ರಕರಣದ ತನಿಖೆ ಪೂರ್ಣಗೊಳಿಸಲು ಇನ್ನೂ 60 ದಿನ ಕಾಲಾವಕಾಶ ನೀಡಿದ ದೆಹಲಿ ಕೋರ್ಟ್

Lingaraj Badiger

ನವದೆಹಲಿ: ಚೀನಾ ಪರ ಪ್ರಚಾರಕ್ಕಾಗಿ ದೇಣಿಗೆ ಪಡೆದ ಆರೋಪದ ಮೇಲೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ನ್ಯೂಸ್‌ಕ್ಲಿಕ್ ಪೋರ್ಟಲ್‌ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ಪೂರ್ಣಗೊಳಿಸಲು ದೆಹಲಿ ನ್ಯಾಯಾಲಯವು ಪೊಲೀಸರಿಗೆ ಶುಕ್ರವಾರ ಇನ್ನೂ 60 ದಿನಗಳ ಕಾಲಾವಕಾಶ ನೀಡಿದೆ.

ತನಿಖೆ ಪೂರ್ಣಗೊಳಿಸಲು ಹೆಚ್ಚಿನ ಸಮಯ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಈ ಆದೇಶವನ್ನು ನೀಡಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ(UAPA)ಯಂತಹ ವಿಶೇಷ ಕಾನೂನುಗಳ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ ದಿನದಿಂದ ಗರಿಷ್ಠ 180 ದಿನಗಳಲ್ಲಿ ತನಿಖೆ ಪೂರ್ಣಗೊಳಿಸಲು ಅವಕಾಶ ಇದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದ ಅನುಮತಿಯಿಲ್ಲದೆ, ತನಿಖಾ ಸಂಸ್ಥೆಯು ತನಿಖೆಯನ್ನು ಪೂರ್ಣಗೊಳಿಸಲು ಬಂಧನದ ದಿನದಿಂದ ಮೂರು ತಿಂಗಳ ಕಾಲಾವಕಾಶ ಇದೆ.

ಕಾನೂನಿನ ಪ್ರಕಾರ, ತನಿಖಾ ಸಂಸ್ಥೆಯು ನಿಗದಿತ ಸಮಯದೊಳಗೆ ತನಿಖೆಯನ್ನು ಪೂರ್ಣಗೊಳಿಸಲು ವಿಫಲವಾದರೆ, ಬಂಧನದಲ್ಲಿರುವ ಆರೋಪಿಗಳು ಜಾಮೀನು ಪಡೆಯುವ ಶಾಸನಬದ್ಧ ಹಕ್ಕನ್ನು ಹೊಂದಿರುತ್ತಾರೆ.

ಇದೇ ವೇಳೆ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಬಂಧಿತ ಸುದ್ದಿ ಪೋರ್ಟಲ್‌ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜನವರಿ 20 ರವರೆಗೆ ವಿಸ್ತರಿಸಿದ್ದಾರೆ.

SCROLL FOR NEXT