ಪಾಟ್ನ: ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಡಿಎಂಕೆ ಪಕ್ಷದ ವಿರುದ್ಧ ತೀವ್ರ ಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷಿಕ ಪ್ರದೇಶಗಳ ಜನರು ತಮಿಳುನಾಡಿನಲ್ಲಿ ಶೌಚಾಲಯ ಸ್ವಚ್ಛ ಮಾಡುತ್ತಿದ್ದು, ಇನ್ನಿತರ ಕೆಳಮಟ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಖಂಡಿಸಿರುವ ಬಿಹಾರ ಡಿಸಿಎಂ ತೇಜಸ್ವಿ ಯಾದವ್, ತಮ್ಮ ಪಕ್ಷ ಆರ್ ಜೆಡಿ ಮಾದರಿಯಲ್ಲೇ ಡಿಎಂಕೆ ಸಹ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಹೊಂದಿರುವ ಪಕ್ಷವಾಗಿದೆ ಇಂತಹ ಹಿನ್ನೆಲೆ ಹೊಂದಿರುವ ಪಕ್ಷದ ನಾಯಕನಿಗೆ ಈ ರೀತಿಯ ಹೇಳಿಕೆ ನೀಡುವುದು ಶೋಭೆಯಲ್ಲ ಎಂದು ಹೇಳಿದ್ದಾರೆ.
"ಡಿಎಂಕೆ ಸಂಸದರು ಜಾತಿ ಅನೀತಿಗಳನ್ನು ಎತ್ತಿ ತೋರಿಸಿದ್ದರೆ, ಕೆಲವು ಸಾಮಾಜಿಕ ಗುಂಪುಗಳ ಜನರು ಮಾತ್ರ ಇಂತಹ ಅಪಾಯಕಾರಿ ಕೆಲಸಗಳನ್ನು ಕೈಗೊಂಡಿದ್ದಾರೆ ಎಂದು ಅವರು ಸೂಚಿಸಿದ್ದರೆ, ಅದು ಅರ್ಥಪೂರ್ಣವಾಗುತ್ತಿತ್ತು" ಎಂದು ಆರ್‌ಜೆಡಿ ನಾಯಕ ಹೇಳಿದರು.
ಇದನ್ನೂ ಓದಿ: INDIA ಕೂಟದ ನಾಯಕರ ವಾಕ್ಸಮರ: 'ಹಿಂದಿ ಕಲಿತ ಬಿಹಾರ, ಉ.ಪ್ರದೇಶದವರು ಚೆನ್ನೈನಲ್ಲಿ ಟಾಯ್ಲೆಟ್ ತೊಳಿತಿದಾರೆ'- ದಯಾನಿಧಿ ಮಾರನ್
"ಆದರೆ ಬಿಹಾರ ಮತ್ತು ಯುಪಿಯ ಸಂಪೂರ್ಣ ಜನತೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಖಂಡನೀಯ. ನಾವು ಅದನ್ನು ಖಂಡಿಸುತ್ತೇವೆ. ದೇಶದ ಇತರ ಭಾಗಗಳಿಂದ ಬರುವವರ ಬಗ್ಗೆ ಜನರು ಗೌರವದಿಂದ ವರ್ತಿಸಬೇಕು ಎಂದು ನಾವು ನಂಬುತ್ತೇವೆ" ಎಂದು ಯಾದವ್ ಹೇಳಿದ್ದಾರೆ.
"ನಾವು ಡಿಎಂಕೆಯನ್ನು ಸಾಮಾಜಿಕ ನ್ಯಾಯದ ನಮ್ಮ ಆದರ್ಶವನ್ನು ಹಂಚಿಕೊಳ್ಳುವ ಪಕ್ಷವಾಗಿ ನೋಡುತ್ತೇವೆ. ಅದರ ನಾಯಕರು ಆದರ್ಶಕ್ಕೆ ವಿರುದ್ಧವಾದ ಮಾತುಗಳನ್ನು ಹೇಳುವುದನ್ನು ತಪ್ಪಿಸಬೇಕು" ಎಂದು ತೇಜಸ್ವಿ ಯಾದವ್ ಸಲಹೆ ನೀಡಿದ್ದಾರೆ.