ದೇಶ

ಡಬ್ಲ್ಯುಎಫ್ಐ ವಿವಾದ: ಬಜರಂಗ್ ಪೂನಿಯಾ ಸೇರಿ ಇತರೆ ಕುಸ್ತಿಪಟುಗಳನ್ನು ಭೇಟಿಯಾದ ರಾಹುಲ್ ಗಾಂಧಿ

Ramyashree GN

ಚಂಡೀಗಢ: ಬುಧವಾರ ಬೆಳಿಗ್ಗೆ ಹರಿಯಾಣದ ಜಜ್ಜರ್ ಜಿಲ್ಲೆಯ ಕುಸ್ತಿ 'ಅಖಾಡ'ಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಜರಂಗ್ ಪೂನಿಯಾ ಸೇರಿದಂತೆ ಇತರೆ ಕುಸ್ತಿಪಟುಗಳೊಂದಿಗೆ ಮಾತುಕತೆ ನಡೆಸಿದರು. 

ಹರಿಯಾಣದ ಹಿರಿಯ ಕಾಂಗ್ರೆಸ್ ನಾಯಕರ ಪ್ರಕಾರ, ರಾಗುಲ್ ಗಾಂಧಿಯವರು ಮುಂಜಾನೆಯೇ ಛರಾ ಗ್ರಾಮದಲ್ಲಿರುವ 'ವಿರೇಂದರ್ ಅಖಾಡ'ಕ್ಕೆ ಭೇಟಿ ನೀಡಿದರು. ನಂತರ ಅವರು ಪುನಿಯಾ ಸೇರಿದಂತೆ ಹಲವು ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿದರು ಎಂದಿದ್ದಾರೆ.

ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಗೆ ಸಂಬಂಧಿಸಿದ ವಿವಾದ ಇದೀಗ ಭುಗಿಲೆದ್ದಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಕುಸ್ತಿಪಟುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

'ಅವರು (ರಾಹುಲ್ ಗಾಂಧಿ) ನಮ್ಮ ದಿನಚರಿ (ತರಬೇತಿ) ಯನ್ನು ನೋಡಲು ಬಂದರು. ಅವರು ನನ್ನೊಂದಿಗೆ ಕುಸ್ತಿ ಮತ್ತು ವ್ಯಾಯಾಮ ಮಾಡಿದರು. ಅವರು ಕುಸ್ತಿಪಟುವಿನ ದೈನಂದಿನ ಜೀವನ ಹೇಗಿರುತ್ತದೆ ಎಂಬುದನ್ನು ನೋಡಲು ಬಂದಿದ್ದರು' ಎಂದು ಬಜರಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ವಿನೇಶ್ ಫೋಗಟ್ ಅವರು ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ವಾಪಸ್ ಮಾಡಿದ್ದಾರೆ. ಅವರು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ, 'ಕುಸ್ತಿಪಟುಗಳು ಹೋರಾಟ ನಡೆಸುತ್ತಿರುವ ಹೊತ್ತಿನಲ್ಲಿ ಈ ಗೌರವಗಳಿಗೆ ಅರ್ಥವೇ ಇಲ್ಲ' ಎಂದು ಉಲ್ಲೇಖಿಸಿದ್ದಾರೆ.

ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಈಮಧ್ಯೆ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರು ಡಬ್ಲ್ಯುಎಫ್ಐನ ನೂತನ ಅಧ್ಯಕ್ಷರಾಗಿ ಡಿಸೆಂಬರ್ 21ರಂದು ಆಯ್ಕೆಯಾಗಿದ್ದಾರೆ. 

ಸಂಜಯ್ ಸಿಂಗ್ ಆಯ್ಕೆಗೆ ಪ್ರತಿರೋಧ ವ್ಯಕ್ತಪಡಿಸಿರುವ ರಿಯೊ ಗೇಮ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಕುಸ್ತಿಗೆ ವಿದಾಯ ಹೇಳಿದ್ದಾರೆ. ಬಜರಂಗ್ ಪೂನಿಯಾ ಮತ್ತು ಡೆಫ್‌ಲಿಂಪಿಕ್ಸ್ ಚಾಂಪಿಯನ್ ವಿರೇಂದರ್ ಸಿಂಗ್ ಯಾದವ್ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ.

ಸಂಜಯ್ ಸಿಂಗ್ ಅವರು ಬ್ರಿಜ್ ಭೂಷಣ್ ಸಿಂಗ್ ಶರಣ್ ಅವರ ಆಪ್ತರಾಗಿದ್ದು, ಡಬ್ಲ್ಯುಎಫ್ಐಗೆ ಬಿಜೆಪಿ ಸಂಸದರಿಗೆ ಸಂಪರ್ಕವಿರುವ ಯಾರೊಬ್ಬರೂ ಪ್ರವೇಶಿಸುವುದನ್ನು ಕುಸ್ತಿಪಟುಗಳು ವಿರೋಧಿಸಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧ ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಮತ್ತು ಸಾಕ್ಷಿ ಮಲಿಕ್ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಅವರು ಈ ವರ್ಷದ ಆರಂಭದಲ್ಲಿ ಜಂತರ್ ಮಂತರ್‌ನಲ್ಲಿ ಸುದೀರ್ಘ ಪ್ರತಿಭಟನೆಯನ್ನು ನಡೆಸಿದ್ದರು.

SCROLL FOR NEXT