ದೇಶ

ಅಯೋಧ್ಯೆಗಿಂದು ಪ್ರಧಾನಿ ಮೋದಿ ಭೇಟಿ: 15,000 ರೂ ಕೋಟಿ ಯೋಜನೆಗೆ ಚಾಲನೆ, ಎಲ್ಲೆಡೆ ಭಾರೀ ಭದ್ರತೆ

Manjula VN

ಅಯೋಧ್ಯೆ: ನೂತನ ರಾಮಮಂದಿರದ ಮೂಲಕ ಕೋಟ್ಯಾಂತರ ಭಕ್ತರ ಸ್ವಾಗತಕ್ಕೆ ಸಜ್ಜಾಗಿರುವ ರಾಮನಗರಿ ಅಯೋಧ್ಯೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿ ಶನಿವಾರ ಭೇಟಿ ನೀಡುತ್ತಿದ್ದು, ಭೇಟಿ ವೇಳೆ 15,000 ರೂ ಕೋಟಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಪ್ರಧಾನಿ ಅವರು ಶನಿವಾರ(ಇಂದು) 11:15ಕ್ಕೆ ಪುನರಾಭಿವೃದ್ಧಿಗೊಂಡ ಅಯೋಧ್ಯೆಗೆ ತಲುಪಲಿದ್ದಾರೆ. ಆರಂಭದಲ್ಲಿ ಹೊಸ ಅಮೃತ್ ಭಾರತ್ ರೈಲುಗಳು ಮತ್ತು ವಂದೇ ಭಾರತ್ ರೈಲುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅಲ್ಲದೇ ಇನ್ನೂ ಹಲವಾರು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 12:15ರ ಸುಮಾರಿಗೆ ಹೊಸದಾಗಿ ನಿರ್ಮಿಸಲಾದ ಅಯೋಧ್ಯೆ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅಲ್ಲಿ ಅವರು ರೂ.15 ಸಾವಿರ ಕೋಟಿಗಿಂತ ಹೆಚ್ಚಿನ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವುಗಳಲ್ಲಿ ಅಯೋಧ್ಯೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸುಮಾರು ರೂ.11,100 ಕೋಟಿ ಯೋಜನೆಗಳು ಮತ್ತು ಉತ್ತರ ಪ್ರದೇಶದಾದ್ಯಂತ ಇತರ ಯೋಜನೆಗಳಿಗೆ ಸಂಬಂಧಿಸಿದ ಸುಮಾರು ರೂ.4600 ಕೋಟಿ ಯೋಜನೆಗಳು ಸೇರಿವೆ.

ಭೇಟಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ‘ನಮ್ಮ ಸರ್ಕಾರ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಸಂಪರ್ಕವನ್ನು ಸುಧಾರಿಸಲು ಹಾಗೂ ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ನಿರ್ಧರಿಸಿದೆ. ಈ ದಿಸೆಯಲ್ಲಿ ನಾನು ನೂತನವಾಗಿ ನಿರ್ಮಿಸಲಾದ ವಿಮಾನ ನಿಲ್ದಾಣ, ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದೇನೆ. ಇದರೊಂದಿಗೆ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದೇನೆ. ಈ ಯೋಜನೆಗಳು ಅಯೋಧ್ಯೆ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ನನ್ನ ಕುಟುಂಬ ಸದಸ್ಯರ ಬದುಕನ್ನು ಹಸನಗೊಳಿಸುತ್ತದೆ' ಎಂದು ಹೇಳಿದ್ದಾರೆ.

SCROLL FOR NEXT