ದೇಶ

ದೆಹಲಿ-ಮುಂಬೈ ಇಂಡಿಗೋ ವಿಮಾನದಲ್ಲಿ ನೀಡಲಾದ ಸ್ಯಾಂಡ್‌ವಿಚ್‌ನಲ್ಲಿ ಹುಳ; ಕ್ಷಮೆ ಕೇಳಿದ ವಿಮಾನಯಾನ ಸಂಸ್ಥೆ

Ramyashree GN

ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಲಾದ ಸ್ಯಾಂಡ್‌ವಿಚ್‌ನಲ್ಲಿ ಹುಳ ಕಂಡುಬಂದಿದ್ದು, ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಅದರ ನಂತರ ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದ್ದು, ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.

ಶುಕ್ರವಾರ ದೆಹಲಿಯಿಂದ ಮುಂಬೈಗೆ ಹೊರಟಿದ್ದ 6E 6107 ವಿಮಾನದಲ್ಲಿ ಈ ಘಟನೆ ನಡೆದಿದೆ.

ಮಹಿಳಾ ಪ್ರಯಾಣಿಕರಾದ ಕುಶ್ಬೂ ಗುಪ್ತಾ ಎಂಬುವವರು ವಿಮಾನದಲ್ಲಿ ನೀಡಲಾದ ಸ್ಯಾಂಡ್‌ವಿಚ್‌ನಲ್ಲಿನ ಹುಳದ ಕಿರು ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಇಂಡಿಗೋ ವಿಮಾನಯಾನ ಸಂಸ್ಥೆಯ ವಕ್ತಾರರು, ದೆಹಲಿಯಿಂದ ಮುಂಬೈಗೆ ಹೊರಟಿದ್ದ 6E 6107 ವಿಮಾನದಲ್ಲಿ ತನ್ನ ಗ್ರಾಹಕರಿಗಾದ ಕೆಟ್ಟ ಅನುಭವದ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

'ತನಿಖೆಯ ನಂತರ, ಈ ನಿರ್ದಿಷ್ಟ ಸ್ಯಾಂಡ್‌ವಿಚ್‌ನ ಸೇವೆಯನ್ನು ನಮ್ಮ ಸಿಬ್ಬಂದಿ ತಕ್ಷಣವೇ ನಿಲ್ಲಿಸಿದ್ದಾರೆ. ಈ ವಿಷಯದ ಕುರಿತು ಸಂಪೂರ್ಣ ಪರೀಕ್ಷೆ ನಡೆಸಲಾಗುತ್ತಿದೆ ಮತ್ತು ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕ್ಯಾಟರರ್‌ನೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದ್ದೇವೆ. ಪ್ರಯಾಣಿಕರಿಗೆ ಉಂಟಾದ ಯಾವುದೇ ಅನಾನುಕೂಲತೆಗಾಗಿ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ' ಎಂದು ವಕ್ತಾರರು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ, ಏರ್‌ಲೈನ್‌ನಿಂದ ನೀಡಲಾಗುತ್ತಿರುವ ಆಹಾರದ ಗುಣಮಟ್ಟವನ್ನು ಅವರು ಪ್ರಶ್ನಿಸಿದ್ದಾರೆ ಮತ್ತು ಹುಳ ಪತ್ತೆಯಾದ ಬಗ್ಗೆ ಕ್ಯಾಬಿನ್ ಸಿಬ್ಬಂದಿಗೆ ತಿಳಿಸಿದರೂ, ಅವರು ಇತರ ಪ್ರಯಾಣಿಕರಿಗೆ ಸ್ಯಾಂಡ್‌ವಿಚ್‌ಗಳನ್ನು ವಿತರಿಸುವುದನ್ನು ಮುಂದುವರೆಸಿದ್ದರು ಎಂದು ಹೇಳಿದ್ದಾರೆ.

ವಿಮಾನಯಾನ ಸಿಬ್ಬಂದಿಗೆ ಯಾವ ರೀತಿಯ ತರಬೇತಿ ನೀಡಲಾಗುತ್ತದೆ ಮತ್ತು ಯಾರಾದರೂ ಸೋಂಕಿಗೆ ಒಳಗಾದರೆ ಯಾರು ಜವಾಬ್ದಾರರಾಗುತ್ತಾರೆ ಎಂಬುದರ ಬಗ್ಗೆಯೂ ಗುಪ್ತಾ ಆಶ್ಚರ್ಯಪಟ್ಟಿದ್ದಾರೆ.

SCROLL FOR NEXT