ದೇಶ

ಇದು ಅಮೃತ್ ಕಾಲದ ಮೊದಲ ಬಜೆಟ್: ನಿರ್ಮಲಾ ಸೀತಾರಾಮನ್ ರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

Lingaraj Badiger

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ 2023-24ನೇ ಸಾಲಿನ  ಬಜೆಟ್ ಅನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಇದು ಅಮೃತ್ ಕಾಲದ ಮೊದಲ ಬಜೆಟ್ ಎಂದು ಹೇಳಿದ್ದಾರೆ. 

ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಈ ಬಜೆಟ್ ಭದ್ರ ಅಡಿಪಾಯ ಹಾಕಿದೆ. ಈ ಬಜೆಟ್ ಬಡವರು, ಮಧ್ಯಮ ವರ್ಗದ ಜನ, ರೈತರು ಸೇರಿದಂತೆ ಮಹತ್ವಾಕಾಂಕ್ಷೆಯ ಯುವ ಭಾರತದ ಕನಸುಗಳನ್ನು ಈಡೇರಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

"ದೇಶಕ್ಕಾಗಿ ಪರಂಪರಾಗತವಾಗಿ ಶ್ರಮಿಸುತ್ತಿರುವ 'ವಿಶ್ವಕರ್ಮ'ರು ಈ ದೇಶದ ಸೃಷ್ಟಿಕರ್ತರು. ಮೊದಲ ಬಾರಿಗೆ 'ವಿಶ್ವಕರ್ಮ' ತರಬೇತಿ ಮತ್ತು ಬೆಂಬಲಕ್ಕೆ ಸಂಬಂಧಿಸಿದ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.

"ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರ ಜೀವನವನ್ನು ಸುಲಭಗೊಳಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ. ಮನೆಯಲ್ಲಿ ಮಹಿಳೆಯರ ಸಬಲೀಕರಣಗೊಳಿಸಲು ವಿಶೇಷ ಉಳಿತಾಯ ಯೋಜನೆ ಪ್ರಾರಂಭಿಸಲಾಗುವುದು" ಎಂದು ಪ್ರಧಾನಿ ಮೋದಿ ಹೇಳಿದರು.

ಬಜೆಟ್ ನಲ್ಲಿ ಪರಿಸರ ಮತ್ತು ಹಸಿರೀಕರಣಕ್ಕೆ ಉತ್ತೇಜನ ನೀಡಲಾಗಿದೆ. ಹಸಿರು ಶಕ್ತಿ, ಹಸಿರು ಬೆಳವಣಿಗೆ ಮತ್ತು ಹಸಿರು ಮೂಲಸೌಕರ್ಯ ಹಾಗೂ ಹಸಿರು ಉದ್ಯೋಗಗಳನ್ನು ಮತ್ತಷ್ಟು ಸೃಷ್ಟಿಸುವ ಸುಸ್ಥಿರ ಭವಿಷ್ಯವನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ತಂತ್ರಜ್ಞಾನ ಮತ್ತು ಹೊಸ ಆರ್ಥಿಕತೆ ಮೇಲೂ ನಾವು ಗಮನಹರಿಸಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

SCROLL FOR NEXT