ದೇಶ

ಗ್ಯಾಂಗ್ ರೇಪ್ ಪ್ರಕರಣದಲ್ಲಿ ತಿಂಗಳ ಹಿಂದೆ 'ಸುಪ್ರೀಂ'ನಿಂದ ಖುಲಾಸೆಗೊಂಡಿದ್ದ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಬಂಧನ!

Vishwanath S

ನವದೆಹಲಿ: ದೆಹಲಿಯ ದ್ವಾರಕಾ ಸೆಕ್ಟರ್ 14 ಪ್ರದೇಶದಲ್ಲಿ ಆಟೋರಿಕ್ಷಾ ಚಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರ ಚಾವ್ಲಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಿಂದ ಖುಲಾಸೆಗೊಂಡಿದ್ದ ವ್ಯಕ್ತಿಯನ್ನು ಸೇರಿ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 

ಸುಪ್ರೀಂ ಕೋರ್ಟ್ ನಿಂದ ಖುಲಾಸೆಗೊಂಡಿದ್ದ ವಿನೋದ್ ಹಾಗೂ ಇತರ ಆರೋಪಿಯನ್ನು ಪವನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುನಿರ್ಕಾ ನಿವಾಸಿ 44 ವರ್ಷದ ಅನಾರ್ ಸಿಂಗ್ ಎಂಬುವರನ್ನು ಜನವರಿ 26ರಂದು ದ್ವಾರಕಾದ ಸೆಕ್ಟರ್ 13ರಲ್ಲಿ ಇರಿದು ಹತ್ಯೆ ಮಾಡಲಾಗಿತ್ತು. ಆತನ ಕತ್ತಿನ ಮೇಲೆ ಚಾಕುವಿನಿಂದ ದಾಳಿ ಮಾಡಿದ ಗುರುತುಗಳಿದ್ದವು. ಆರೋಪಿಗಳ ವಿಚಾರಣೆ ವೇಳೆ ಆಟೊರಿಕ್ಷಾ ಹತ್ತಿದ ಬಳಿಕ ದ್ವಾರಕಾ ತಲುಪಿದಾಗ ಚಾಲಕನನ್ನು ದರೋಡೆಗೆ ಯತ್ನಿಸಿದ್ದು, ಆಟೋ ಚಾಲಕ ಪ್ರತಿರೋಧ ತೋರಿದಾಗ ಚಾಕುವಿನಿಂದ ಇರಿದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ವಿನೋದ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದನು. ಚಾವ್ಲಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಮಾರು 10 ವರ್ಷಗಳ ಕಾಲ ಜೈಲಿನಲ್ಲಿದ್ದನು. 2012ರಲ್ಲಿ ದೆಹಲಿಯ ಚಾವ್ಲಾದಲ್ಲಿ 19 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿತ್ತು. ಅಪಹರಣದ ಮೂರು ದಿನಗಳ ನಂತರ ಯುವತಿಯ ದೇಹ ಪತ್ತೆಯಾಗಿತ್ತು. ಯುವತಿ ಗುರುಗ್ರಾಮದ ಸೈಬರ್ ಸಿಟಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದು, ಉತ್ತರಾಖಂಡದ ನಿವಾಸಿಯಾಗಿದ್ದಳು.

SCROLL FOR NEXT