ದೇಶ

ಶಾರದಾ ಚಿಟ್‌ ಫಂಡ್‌ ಹಗರಣ: ನಳಿನಿ ಚಿದಂಬರಂ ಸೇರಿದಂತೆ ಇತರರಿಗೆ ಸೇರಿದ 6 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

Ramyashree GN

ನವದೆಹಲಿ: ಬಹುಕೋಟಿ ಶಾರದಾ ಚಿಟ್‌ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ಮತ್ತು ಸಿಪಿಎಂ ಮಾಜಿ ಶಾಸಕ ದೇವೇಂದ್ರನಾಥ್ ಬಿಸ್ವಾಸ್ ಸೇರಿದಂತೆ ಇತರರಿಗೆ ಸೇರಿದ 6 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಶುಕ್ರವಾರ ತಿಳಿಸಿದೆ.

ಸಾವಿರಾರು ಜನರು ತಮ್ಮ ಜೀವಿತಾವಧಿಯ ಗಳಿಕೆಯನ್ನು ಉಳಿಸಿ ಹೂಡಿಕೆ ಮಾಡಿದ್ದ ಸಾವಿರಾರು ಹೂಡಿಕೆದಾರರಿಗೆ ವಂಚಿಸಿದ ಆರೋಪದ ಮೇಲೆ 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ 3.30 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 3 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. 

ಫಲಾನುಭವಿಗಳ ಪಟ್ಟಿಯಲ್ಲಿ ಖ್ಯಾತ ವಕೀಲೆ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ, ಈಸ್ಟ್ ಬೆಂಗಾಲ್ ಕ್ಲಬ್‌ನ ದೇವವ್ರತ ಸರ್ಕಾರ್, ದೇವೇಂದ್ರನಾಥ್ ಬಿಸ್ವಾಸ್ (ಮಾಜಿ ಐಪಿಎಸ್ ಮತ್ತು ಮಾಜಿ ಶಾಸಕ ಸಿಪಿಎಂ) ಮತ್ತು ಮಾಜಿ ಸಚಿವ ದಿವಂಗತ ಅಂಜನ್ ದತ್ತಾ ಮಾಲೀಕತ್ವದ ಅನುಭೂತಿ ಪ್ರಿಂಟರ್ಸ್ ಅಂಡ್ ಪಬ್ಲಿಕೇಷನ್ಸ್ ಸೇರಿದೆ. 

ಶಾರದಾ ಗ್ರೂಪ್ 2013ರವರೆಗೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಕಾರ್ಯಾಚರಣೆಯೊಂದಿಗೆ ಚಿಟ್ ಫಂಡ್ ಹಗರಣವನ್ನು ನಡೆಸಿತು. ಈ ಸಮೂಹದ ಕಂಪನಿಯು ಒಟ್ಟುಗೂಡಿಸಿರುವ ಒಟ್ಟು ಹಣದ ಪ್ರಮಾಣವು ಸುಮಾರು 2,459 ಕೋಟಿ ರೂಪಾಯಿಗಳಷ್ಟಿದ್ದು, ಅದರಲ್ಲಿ ಇಲ್ಲಿವರೆಗೆ ಠೇವಣಿದಾರರಿಗೆ ಬಡ್ಡಿ ಮೊತ್ತವನ್ನು ಹೊರತುಪಡಿಸಿ ಸುಮಾರು 1,983 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿಲ್ಲ. ಕೋಲ್ಕತ್ತಾ ಪೊಲೀಸರು ಮತ್ತು ಸಿಬಿಐನ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ 2013 ರಲ್ಲಿ ಶಾರದಾ ಗ್ರೂಪ್ ಆಫ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.

SCROLL FOR NEXT