ದೇಶ

ಕೊಲಿಜಿಯಮ್ ವ್ಯವಸ್ಥೆ ಬದಲಾಯಿಸುವ ಅಗತ್ಯವಿಲ್ಲ: ಮಾಜಿ ಸಿಜೆಐ ಯುಯು ಲಲಿತ್

Srinivas Rao BV

ಚೆನ್ನೈ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಡ್ಡಾಯ ಇಂಟರ್ನ್‌ಶಿಪ್‌ಗಳಿರುವಂತೆಯೇ ಕಾನೂನು ವಿದ್ಯಾರ್ಥಿಗಳಿಗೂ ಕಡ್ಡಾಯ ಇಂಟರ್ನ್‌ಶಿಪ್‌ಗಳನ್ನು ಪರಿಚಯಿಸಬೇಕು ಈ ಮೂಲಕ ಕಾನೂನು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿ ಗ್ರಾಮೀಣ ಜನರೊಂದಿಗೆ ಕೆಲಸ ಮಾಡಬಹುದು ಎಂದು ನಿವೃತ್ತ ಸಿಜೆಐ ಯುಯು ಲಲಿತ್ ಅಭಿಪ್ರಾಯಪಟ್ಟಿದ್ದಾರೆ.
 
ಇದೇ ವೇಳೆ ಕೊಲಿಜಿಯಂ ವ್ಯವಸ್ಥೆ ಬದಲಾಗಬೇಕೆ? ಎಂಬ ಪ್ರಶ್ನೆಗೆ ನ್ಯಾ.ಲಲಿತ್ ಅವರು ಸ್ಪಷ್ಟವಾಗಿ ಇಲ್ಲ ಎಂಬ ಉತ್ತರ ನೀಡಿದ್ದಾರೆ. ಕೊಲಿಜಿಯಂ ವ್ಯವಸ್ಥೆ ಬದಲಾವೆಣೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ವಿವಾದ ಉಂಟಾಗಿತ್ತು. 
 
ಥಿಂಕ್ ಎಡು ಕಾನ್ಕ್ಲೇವ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾನೂನನ್ನು ಏಕೆ ಅಧ್ಯಯನ ಮಾಡಬೇಕು: ಸಾಮಾಜಿಕ ಕರ್ತವ್ಯ ಮತ್ತು ಕಾನೂನು ಜವಾಬ್ದಾರಿ ಎಂಬ ವಿಷಯದ ಬಗ್ಗೆ ಮಾತನಾಡಿರುವ ಯುಯು ಲಲಿತ್, ಕಾನೂನು ಅಧ್ಯಯನ ಎಂಬುದು ಕೇವಲ ವಿವಿ ಹಾಗೂ ಕಾಲೇಜುಗಳಿಗೆ ಮಾತ್ರ ಸೀಮಿತವಾಗಬಾರದು ಬದಲಾಗಿ ಜನಸಾಮಾನ್ಯರಿಗೆ ತಲುಪಿ, ಸಾಮಾಜಿಕ ಉಪಕರಣವಾಗಬೇಕು. ಕಾನೂನು ವಿದ್ಯಾರ್ಥಿಗಳಿಗೆ ಗ್ರಾಮೀಣ ಮಂದಿಯ ನಡುವೆ ಕಾರ್ಯನಿರ್ವಹಿಸಲು, ಅವರೊಂದಿಗೆ ಸಂವಹನ ನಡೆಸಿ ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹಾಗೂ ಅವರು ಯಾವೆಲ್ಲಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳಿಗೂ ವೈದ್ಯಕೀಯ ವಿದ್ಯಾರ್ಥಿಗಳ ಮಾದರಿಯಲ್ಲೇ ಒಂದು ವರ್ಷಗಳ ಕಡ್ಡಾಯ ಇಂಟರ್ನ್ಶಿಪ್ ಗಳನ್ನು ನೀಡಬೇಕೆಂದು ನಿವೃತ್ತ ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.

ಈ ರೀತಿ ಇಂಟರ್ನ್ಶಿಪ್ ಗಳನ್ನು ನೀಡುವುದರಿಂದ ಗ್ರಾಮೀಣ ಮಂದಿಗೆ ತಮಗೆ ಇರುವ ಕಾನೂನು ಹಕ್ಕುಗಳು ಹಾಗೂ ಕಾನೂನು ಸಹಾಯಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ ಎಂದು ನಿವೃತ್ತ ಸಿಜೆಐ ಹೇಳಿದ್ದಾರೆ.
 
ಎನ್ಎಎಲ್ಎಸ್ಎ ಅಧ್ಯಕ್ಷ ಸ್ಥಾನದಿಂದ ಪಡೆದ ಅನುಭವಗಳನ್ನು ಹಂಚಿಕೊಂಡಿರುವ ನ್ಯಾ. ಲಲಿತ್, ಜನಸಂಖ್ಯೆಯ ಶೇ.66 ರಷ್ಟು ಮಂದಿ ಬಡತನ ರೇಖೆಗಿಂತಲೂ ಕೆಳಗಿದ್ದು, ಅವರನ್ನೊಳಗೊಂಡ ಮೂರನೇ ಎರಡರಷ್ಟು ಕಾನೂನು ವಿಷಯಗಳಿಗೆ ಕಾನೂನು ನೆರವು ಸೇವೆಗಳ ಅಗತ್ಯವಿದೆ. ಆದರೆ ಶೇ.15 ರಷ್ಟು ಜನಸಂಖ್ಯೆಗೆ ಮಾತ್ರ ಕಾನೂನು ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಹಲವು ಮಂದಿಗೆ ತಮಗೆ ಕಾನೂನು ನೆರವು ಸಿಗಲಿದೆ ಎಂಬ ಬಗ್ಗೆ ಅರಿವೇ ಇಲ್ಲ ಅಥವ ಅದರಲ್ಲಿ ನಂಬಿಕೆ ಇಲ್ಲ ಎಂಬುದನ್ನು ತೋರುತ್ತದೆ ಎಂದು ಲಲಿತ್ ಹೇಳಿದ್ದಾರೆ.

SCROLL FOR NEXT