ದೇಶ

ಇಸ್ರೊದಿಂದ 'SSLV-D2' ಯಶಸ್ವಿ ಉಡಾವಣೆ: ಮೂರು ಉಪಗ್ರಹಗಳು ಕಕ್ಷೆಗೆ ಸೇರ್ಪಡೆ

Sumana Upadhyaya

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ ಸಣ್ಣ ಉಪಗ್ರಹ ಉಡಾವಣಾ ವಾಹಕ-SSLV-D2ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿ, ಮೂರು ಉಪಗ್ರಹಗಳನ್ನು ನಿಖರ ಕಕ್ಷೆಗೆ ಸೇರಿಸಿದೆ. 

ಇದರೊಂದಿಗೆ, ಇಸ್ರೋ ಈಗ ಬೇಡಿಕೆಯ ಮೇಲೆ ಉಪಗ್ರಹಗಳನ್ನು ಉಡಾವಣೆ ಮಾಡಲು ಸಮರ್ಥವಾಗಿದೆ. ರಾಕೆಟ್ ನ್ನು ಜೋಡಿಸಿ, ಪರೀಕ್ಷಿಸಿ ಒಂದು ವಾರದ ಅವಧಿಯಲ್ಲಿ ಉಡಾವಣೆ ಮಾಡಬಹುದಾದಷ್ಟು ಸಮರ್ಥವಾಗಿದೆ. SSLVಯನ್ನು ಸಣ್ಣ, ಸೂಕ್ಷ್ಮ ಅಥವಾ ನ್ಯಾನೊಸಾಟಲೈಟ್‌ಗಳ (10 ರಿಂದ 500 ಕೆಜಿ ದ್ರವ್ಯರಾಶಿ) ಕಡಿಮೆ ಭೂಮಿಯ ಕಕ್ಷೆಗಳಿಗೆ ಉಡಾವಣೆ ಮಾಡಲು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ.

ಇಂದು ಈ ಬಗ್ಗೆ ಹೇಳಿಕೆ ನೀಡಿರುವ ಇಸ್ರೊ, ಇದು ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದಲ್ಲಿ ಸೇವೆಗಳನ್ನು ಪೂರೈಸುತ್ತದೆ, ಕಡಿಮೆ ತಿರುಗುವ ಸಮಯ ಮತ್ತು ಕನಿಷ್ಠ ಉಡಾವಣಾ ಮೂಲಸೌಕರ್ಯ ಸಾಕಾಗುತ್ತದೆ. 3 ಪ್ರೊಪಲ್ಷನ್ ಹಂತಗಳು ಮತ್ತು ವೇಗದ ಟರ್ಮಿನಲ್ ಮಾಡ್ಯೂಲ್ ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು 34 ಮೀಟರ್ ಎತ್ತರ, 2 ಮೀ ಸುತ್ತಳತೆ ಮತ್ತು 120 ಟನ್ ಮೇಲಕ್ಕೇರುವ ಸಾಮರ್ಥ್ಯವನ್ನು ಹೊಂದಿದೆ.

ಇಂದಿನ ಉಡಾವಣಾ ಕಾರ್ಯಾಚರಣೆಯು ಶ್ರೀಹರಿಕೋಟಾದ ಮೊದಲ ಉಡಾವಣಾ ಪ್ಯಾಡ್‌ನಿಂದ ಬೆಳಿಗ್ಗೆ 9.18 ಕ್ಕೆ ಪರಿಪೂರ್ಣವಾಗಿ ಮೇಲಕ್ಕೆ ಹಾರಿದ ನಂತರ ಕೇವಲ 900 ಸೆಕೆಂಡುಗಳಲ್ಲಿ (15 ನಿಮಿಷಗಳು) ಪೂರ್ಣಗೊಂಡಿತು.

ಪ್ರಾಥಮಿಕ ಉಪಗ್ರಹ ಭೂ ವೀಕ್ಷಣಾ ಉಪಗ್ರಹ (EOS-07), 156.3 ಕೆಜಿ ತೂಕದ ISRO ಅಭಿವೃದ್ಧಿಪಡಿಸಿದೆ; ಯುಎಸ್ ಮೂಲದ ಸ್ಟಾರ್ಟ್ ಅಪ್ ಸಂಸ್ಥೆ ಅಂಟಾರಿಸ್‌ಗೆ ಸೇರಿದ 10.2 ಕೆಜಿ ತೂಕದ ಜಾನಸ್-1 ಉಪಗ್ರಹ ಮತ್ತು ಚೆನ್ನೈ ಸ್ಟಾರ್ಟ್ ಅಪ್ ಸ್ಪೇಸ್ ಕಿಡ್ಜ್ ಇಂಡಿಯಾದ 8.7 ಕೆಜಿ ಉಪಗ್ರಹ ಆಜಾಡಿಸ್ಯಾಟ್-2 ಅನ್ನು 450 ಕಿಮೀ ವೃತ್ತಾಕಾರದ ಕಕ್ಷೆಗೆ ಸೇರಿಸಲಾಯಿತು. 

ಕಳೆದ ಆಗಸ್ಟ್‌ನಲ್ಲಿ ಉಡಾವಣೆಯಾದ SSLV ಯ ಮೊದಲ ಅಭಿವೃದ್ಧಿ ಉಪಗ್ರಹಗಳನ್ನು ನಿಖರ ಕಕ್ಷೆಯಲ್ಲಿ ಇರಿಸಲು ವಿಫಲವಾಗಿತ್ತು. ಇಂದು ಯಶಸ್ವಿ ಉಡಾವಣೆಯ ನಂತರ ಮಾತನಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್, ಉಪಗ್ರಹಗಳನ್ನು ಉಡಾವಣೆ ಮಾಡಲು ದೇಶವು ಇನ್ನೂ ಒಂದು ರಾಕೆಟ್ ಹೊಂದಿದೆ.

SSLV-D2 ರಾಕೆಟ್ ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸಾಧಿಸಿದ ಕಕ್ಷೆ ಉತ್ತಮವಾಗಿತ್ತು. ಎಲ್ಲಾ ರಾಕೆಟ್ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಹೇಳಿದರು. ಇಸ್ರೊ ಇಂಗ್ಲೆಂಡ್ ಮೂಲದ OneWeb ನ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.

ಎಸ್‌ಎಸ್‌ಎಲ್‌ವಿಯನ್ನು ಆರ್ಥಿಕವಾಗಿ ಮತ್ತು ಉದ್ಯಮದ ಉತ್ಪಾದನೆಗೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲು ಸಹಾಯವಾಗಲಿದೆ. ಯಶಸ್ವಿ ಉಡಾವಣೆಯು ಈಗ 10 ರಿಂದ 500 ಕೆಜಿ ತೂಕದ ಸಣ್ಣ ಉಪಗ್ರಹಗಳಿಗೆ ಬೇಡಿಕೆ ಆಧಾರಿತ ಉಡಾವಣಾ ಸೇವೆಯನ್ನು ಪ್ರಾರಂಭಿಸಲು ಇಸ್ರೋಗೆ ಅವಕಾಶವನ್ನು ನೀಡುತ್ತದೆ.

SSLV-D2 ವಿಶೇಷತೆ: ಇದು 10 ರಿಂದ 500 ಕೆ.ಜಿ ಭಾರದ ವಸ್ತುಗಳನ್ನು ಅಂದರೆ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಕೇವಲ 72 ಗಂಟೆಗಳಲ್ಲಿ ಈ ಉಡಾವಣಾ ವಾಹಕವನ್ನು ಸಿದ್ಧಪಡಿಸಿ ಲಾಂಚ್‌ಪ್ಯಾಂಡ್ (ಉಡಾವಣೆ ಸ್ಥಳ)ನಲ್ಲಿ ಇರಿಸಬಹುದು. ಭೂಮಿಯ ಮೇಲ್ಬಾಗದಲ್ಲಿನ 500 ಕಿ.ಮೀ ಎತ್ತರಕ್ಕೆ ಉಪಗ್ರಹಗಳನ್ನು ಸುರಕ್ಷಿತವಾಗಿ ಒಯ್ದು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಈ ಸಣ್ಣ ಉಪಗ್ರಹ ಉಡಾವಣಾ ವಾಹಕಕ್ಕೆ ಇದೆ.

ಇಸ್ರೋದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಲ್ಯಾಂಡಿಂಗ್ ಪ್ರಯೋಗವನ್ನು ಕೈಗೊಳ್ಳಲಾಗುವುದು. ವರ್ಷಾಂತ್ಯದಲ್ಲಿ ಭಾರತ ಮತ್ತು ಯುಎಸ್ ಜಂಟಿ ಯೋಜನೆಯಾದ NISAR ಉಪಗ್ರಹವನ್ನು ಉಡಾವಣೆ ಮಾಡಲಾಗುವುದು.

SCROLL FOR NEXT