ದೇಶ

ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಕಾಲೇಜು ವಿದ್ಯಾರ್ಥಿನಿಗೂ ಉಚಿತ ಸ್ಕೂಟಿ: ಅಮಿತ್ ಶಾ

Lingaraj Badiger

ಅಗರ್ತಲಾ: ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಅಧಿಕಾರಕ್ಕೆ ಬಂದರೆ ಕಾಲೇಜುಗಳಿಗೆ ಹೋಗುವ ಪ್ರತಿಯೊಬ್ಬ ವಿದ್ಯಾರ್ಥಿನಿಗೂ ಉಚಿತ ಸ್ಕೂಟಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಅವರು ಭರವಸೆ ನೀಡಿದ್ದಾರೆ.

60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16 ರಂದು ಚುನಾವಣೆ ನಡೆಯಲಿದ್ದು, ಇಂದು ಸೆಪಹಿಜಾಲಾ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, "ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಪ್ರತಿ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಕೂಟಿ ನೀಡುತ್ತೇವೆ ಎಂದರು. ಅಲ್ಲದೆ ಚುನಾವಣೆಗೆ ಮುಂಚೆಯೇ ಕಮ್ಯುನಿಸ್ಟರು ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಜೊತೆ ಕೈಜೋಡಿಸುವ ಮೂಲಕ ಸಿಪಿಎಂ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದೆ. ಸಿಪಿಎಂ ರಾಜ್ಯದಲ್ಲಿ ಎರಡು ದಶಕಗಳ ಕಾಲ ಅಧಿಕಾರ ನಡೆಸಿದೆ. ಆದರೆ ಈಗ ಆ ಪಕ್ಷ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ದುಸ್ಥಿತಿಗೆ ತಲುಪಿದೆ. ಕೇರಳದಲ್ಲಿ ಪರಸ್ಪರ ಬಡಿದಾಡುವ ಎರಡೂ ಪಕ್ಷಗಳು, ತ್ರಿಪುರಾದಲ್ಲಿ ಒಂದಾಗಿರುವುದು ಅವರ ಅಧಿಕಾರ ಲಾಲಸೆಗೆ ಸಾಕ್ಷಿ ಎಂದರು.

ತ್ರಿಪುರಾದಲ್ಲಿ ಸಿಪಿಎಂ ಅನೇಕ ಕಾಂಗ್ರೆಸ್‌ ಕಾರ್ಯಕರ್ತರ ಹತ್ಯೆಗೆ ಕಾರಣವಾಗಿದೆ. ಅಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಅಮಿತ್‌ ಶಾ ಗುಡುಗಿದರು.

SCROLL FOR NEXT