ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸಂಸದೀಯ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಆಧಾರರಹಿತ ಆರೋಪ ಮಾಡಿರುವ ರಾಹುಲ್ ಗಾಂಧಿಗೆ ಬಿಜೆಪಿ ಮುಖಂಡ ನಿಶಿಕಾಂತ್ ದುಬೆ ನೋಟಿಸ್ ನೀಡಿದ್ದಾರೆ. ರಾಹುಲ್ ಗಾಂಧಿ ಮಾಡಿರುವ ಆರೋಪಗಳಿಗೆ ಸಾಕ್ಷ್ಯಧಾರವಿರುಬೇಕು, ಆದರೆ, ಅವರು ಯಾವುದೇ ಸಾಕ್ಷ್ಯಧಾರ ತೋರಿಸುತ್ತಿಲ್ಲ. ನಾವು ದೇಶದ ಜನತೆಗೆ ಉತ್ತರ ನೀಡಬೇಕಾಗಿದೆ. ಈ ಬಾರಿ ನೋಟಿಸ್ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಜೋಶಿ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ರಾಹುಲ್ ಗಾಂಧಿ ನೀಡಿರುವ ಅವಹೇಳನಕಾರಿ, ಅಸಂಸದೀಯ, ಹಾದಿ ತಪ್ಪಿಸುವ ಹೇಳಿಕೆ ಸದನ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಘನತೆಗೆ ಧಕ್ಕೆ ತಂದಿರುವುದಾಗಿ ದುಬೆ ಫೆಬ್ರವರಿ 8 ರಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಳುಹಿಸಿರುವ ನೋಟಿಸ್ ನಲ್ಲಿ ಆರೋಪಿಸಲಾಗಿದೆ.
ಹಿಡನ್ ಬರ್ಗ್- ಅದಾನಿ ವಿವಾದದ ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ದಿನಗಳಿಂದಲೂ ಗೌತಮ್ ಅದಾನಿ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಮೋದಿ 2014ರಲ್ಲಿ ಪ್ರಧಾನಿಯಾದ ನಂತರ ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 609ರಿಂದ ನಂಬರ್ 2 ಸ್ಥಾನಕ್ಕೇರಿದರು ಎಂದು ರಾಹುಲ್ ಆರೋಪಿಸಿದರು. ರಾಹುಲ್ ಆರೋಪ ವಿರುದ್ಧ ಬಿಜೆಪಿ ಲೋಕಸಭೆ ಹಾಗೂ ಹೊರಗಡೆ ಪ್ರತಿಭಟನೆ ನಡೆಸಿತ್ತು.