ದೇಶ

ವ್ಯಾಲೆಂಟೇನ್ಸ್‌ ಡೇ: ಪಾರ್ಕ್ ನಲ್ಲಿ ಕುಳಿತಿದ್ದ ದಂಪತಿ ಮೇಲೆ ಭಜರಂಗ ದಳ ಕಾರ್ಯಕರ್ತರ ದಾಳಿ

Nagaraja AB

ಗಾಂಧಿನಗರ: ಪ್ರೇಮಿಗಳ ದಿನವಾದ ಇಂದು  ಪಾರ್ಕ್ ನಲ್ಲಿ ಕುಳಿತಿದ್ದ ದಂಪತಿ ಮೇಲೆ ಬಲಪಂಥೀಯ ಭಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ನಡೆದಿದೆ. ಪ್ರೇಮಿಗಳ ದಿನಾಚರಣೆ ವಿರುದ್ಧವಾಗಿ ಪ್ರತಿಭಟನೆ ನಡೆಸಲು ಸೆಂಟ್ರಲ್ ವಿಸ್ಟಾ ಗಾರ್ಡನ್ ಒಳಗಡೆ ಆಗಮಿಸಿದ ಭಜರಂಗ ದಳ ಕಾರ್ಯಕರ್ತರು, ದಂಪತಿ ಮೇಲೆ ದಾಳಿ ನಡೆಸಿದ್ದು, ಅಲ್ಲಿಂದ ಅವರನ್ನು ಓಡಿಸಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್ ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು, ಪ್ರೇಮಿಗಳ ದಿನದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಭಜರಂಗದಳ ಕಾರ್ಯಕರ್ತರಿಗೆ ಸಮನ್ಸ್ ನೀಡಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಘಟನೆಯ ವೀಡಿಯೊದಲ್ಲಿ, ಸುಮಾರು 10 ಭಜರಂಗದಳ ಕಾರ್ಯಕರ್ತರು ದೊಣ್ಣೆಗಳೊಂದಿಗೆ ಘೋಷಣೆ ಕೂಗುತ್ತಾ ಪಾರ್ಕ್ ನಲ್ಲಿ ಕುಳಿತಿದ್ದ ದಂಪತಿಯನ್ನು ಓಡಿಸಿರುವ ದೃಶ್ಯವಿದೆ. 

ಪ್ರೇಮಿಗಳ ದಿನಾಚರಣೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಆದ್ದರಿಂದ ಇದಕ್ಕೆ ವಿರೋಧ ವ್ಯಕ್ತಪಡಿಸಲು ಪಾರ್ಕ್ ಒಳಗಡೆ ಹೋಗಿರುವುದಾಗಿ ಭಜರಂಗದಳ ಗಾಂಧಿನಗರ ಘಟಕದ ಸಂಚಾಲಕ ಶಕ್ತಿಸಿನ್ಹಾ ಝಲಾ ಹೇಳಿದ್ದಾರೆ. 
ಬಲಪಂಥೀಯ ಸಂಘಟನೆಯು ಪ್ರೀತಿಯ ಹೆಸರಿನಲ್ಲಿ ಅಶ್ಲೀಲತೆ" ಪ್ರದರ್ಶನಕ್ಕೆ ವಿರುದ್ಧವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

"ನಾವು ಯಾರಿಗೂ ಕಿರುಕುಳ ನೀಡಿಲ್ಲ,ಜನರು ಇಂದು ಪ್ರೀತಿಯ ಹೆಸರಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಹಿಂದೂ ಜನತೆಗೆ ಸರಿಯಾದ ಮಾರ್ಗ ತೋರಿಸುವುದು ನಮ್ಮ ಕರ್ತವ್ಯ ಹಾಗಾಗೀ ಪಾರ್ಕ್ ಒಳಗಡೆ ಹೋಗಿರುವುದಾಗಿ ಅವರು ತಿಳಿಸಿದ್ದಾರೆ

SCROLL FOR NEXT