ದೇಶ

ಮದ್ರಾಸ್ ಐಐಟಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ, ಮತ್ತೋರ್ವ ವಿದ್ಯಾರ್ಥಿ ಆತ್ಮಹತ್ಯೆ

Nagaraja AB

ಮದ್ರಾಸ್: ಮದ್ರಾಸ್ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಐಐಟಿಯಲ್ಲಿ 2ನೇ ವರ್ಷದಲ್ಲಿ ಬಿಟೆಕ್ ಓದುತ್ತಿದ್ದ ಕರ್ನಾಟಕದ ವಿದ್ಯಾರ್ಥಿ ವಿವೇಶ್ (21) ಹಾಸ್ಟೆಲ್ ಕೊಠಡಿಯಲ್ಲಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಾದ ಬಳಿಕ ಹಾಸ್ಟೆಲ್ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲಿದ್ದ ವಿವೇಶ್ ನನ್ನು ವಿದ್ಯಾರ್ಥಿಗಳು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಮತ್ತೊಂದು ಘಟನೆಯಲ್ಲಿ ಇದೇ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ  ಸ್ನಾತಕೋತ್ತರ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂಲತ: ಮಹಾರಾಷ್ಟ್ರದ  22 ವರ್ಷದ ವಿದ್ಯಾರ್ಥಿ, ಐಐಟಿ ಸಂಸ್ಥೆಯ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಕಾಣಿಸದಿರುವುದನ್ನು ಗಮನಿಸಿದ ಮತ್ತೋರ್ವ ವಿದ್ಯಾರ್ಥಿ, ಹಾಸ್ಟೆಲ್ ವಾರ್ಡನ್ ಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. 

ಕೊಠಡಿ ಬಾಗಿಲು ತೆರೆದಾಗ, ಆತ ಶೇಲಿಂಗ್ ನಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.  ಕುಟುಂಬದ ಸಮಸ್ಯೆಯಿಂದಾಗಿ ವಿದ್ಯಾರ್ಥಿ ಈ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಕೊತ್ತೂರ್ ಪುರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಎರಡು ಘಟನೆಗಳ ಬಗ್ಗೆ ಐಐಟಿ ಮದ್ರಾಸ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

SCROLL FOR NEXT