ದೇಶ

ರಿಂಡಾ ಘೋಷಿತ ಉಗ್ರ; ಖಲಿಸ್ತಾನ್ ಟೈಗರ್ ಫೋರ್ಸ್, ಜೆಕೆಜಿಎಫ್ ಉಗ್ರ ಸಂಘಟನೆಗಳು: ಗೃಹ ಸಚಿವಾಲಯ

Srinivasamurthy VN

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಪಂಜಾಬ್‌ನಲ್ಲಿ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಕುಖ್ಯಾತಿ ಗಳಿಸಿದ್ದ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾನನ್ನು ಘೋಷಿತ ಉಗ್ರರ ಪಟ್ಟಿಗೆ ಸೇರಿಸಲಾಗಿದ್ದು, ಇದಲ್ಲದೆ ಖಲಿಸ್ತಾನ್ ಟೈಗರ್ ಫೋರ್ಸ್ (KTF) ಮತ್ತು ಜಮ್ಮು ಮತ್ತು ಕಾಶ್ಮೀರ ಘಜ್ನವಿ ಫೋರ್ಸ್ (JKGF) ಅನ್ನು ಉಗ್ರ ಸಂಘಟನೆಗಳು ಎಂದು ಘೋಷಣೆ ಮಾಡಿದೆ.

ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯವು ಈ ಬಗ್ಗೆ ಶುಕ್ರವಾರ ಆದೇಶ  ಹೊರಡಿಸಿದ್ದು, ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾನನ್ನು ಭಯೋತ್ಪಾದಕ ಎಂದು ಘೋಷಿಸಿದ್ದು, ಕೆಟಿಎಫ್ (ಖಲಿಸ್ತಾನ್ ಟೈಗರ್ ಫೋರ್ಸ್) ಮತ್ತು ಜಮ್ಮು ಮತ್ತು ಕಾಶ್ಮೀರ ಘಜ್ನವಿ ಫೋರ್ಸ್(ಜೆಕೆಜಿಎಫ್) ಉಗ್ರ ಸಂಘಟನೆಗಳು ಎಂದು ಘೋಷಣೆ ಮಾಡುವ ಮೂಲಕ ಕಾನೂನು ಕುಣಿಕೆ ಬಿಗಿಗೊಳಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಮಹತ್ವ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತನಿಖೆಯಿಂದ ಸ್ಪಷ್ಟವಾಗಿದೆ. ಆತ ಪ್ರಸ್ತುತ ಗಡಿಯಲ್ಲಿರುವ ಪಾಕಿಸ್ತಾನದ ಲಾಹೋರ್ ನಗರದಲ್ಲಿ ಪಾಕ್ ಏಜೆನ್ಸಿಗಳ ರಕ್ಷಣೆಯಲ್ಲಿದ್ದಾನೆ ಎನ್ನಲಾಗಿದೆ. ವಿಶೇಷವಾಗಿ ಪಂಜಾಬ್‌ನಲ್ಲಿ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಂಧು ಭಾಗಿಯಾಗಿರುವುದು ಕಂಡುಬಂದಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯ (UAPA) ನಾಲ್ಕನೇ ಶೆಡ್ಯೂಲ್‌ನಲ್ಲಿ ಆತನ ವಿರುದ್ಧ ಎಲ್ಲ ಆರೋಪಗಳನ್ನು ಸೇರಿಸಲಾಗಿದೆ. ಇಲ್ಲಿಯವರೆಗೆ, ಒಟ್ಟು 54 ಗೊತ್ತುಪಡಿಸಿದ ಭಯೋತ್ಪಾದಕರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. 

ಉಗ್ರ ಸಂಘಟನೆಗಳ ಪಟ್ಟಿಗೆ ಮತ್ತೆರಡು ಸೇರ್ಪಡೆ
ಇನ್ನು ಉಗ್ರ ಸಂಘಟನೆಗಳ ಪಟ್ಟಿಗೆ ಮತ್ತೆರಡು ಸಂಘಟನೆಗಳನ್ನು ಸೇರ್ಪಡೆ ಮಾಡಲಾಗಿದ್ದು, ಪಂಜಾಬ್ ನ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮತ್ತು ಜಮ್ಮು ಮತ್ತು ಕಾಶ್ಮೀರದ ಜಮ್ಮು ಮತ್ತು ಕಾಶ್ಮೀರ ಘಜ್ನವಿ ಫೋರ್ಸ್ (JKGF) ಅನ್ನು ಉಗ್ರ ಸಂಘಟನೆಗಳು ಎಂದು ಘೋಷಣೆ ಮಾಡಿ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಉಗ್ರಗಾಮಿ ಸಂಘಟನೆಯಾಗಿದ್ದು, ಇದು ಪಂಜಾಬ್‌ನಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಭಾರತದ ಪ್ರಾದೇಶಿಕ ಸಮಗ್ರತೆ, ಏಕತೆ, ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಸವಾಲು ಹಾಕುವ ಗುರಿಯನ್ನು ಹೊಂದಿದೆ. ಈ ಸಂಘಟನೆಯು ಪಂಜಾಬ್‌ನಲ್ಲಿ ಉದ್ದೇಶಿತ ಹತ್ಯೆಗಳು ಸೇರಿದಂತೆ ವಿವಿಧ ಭಯೋತ್ಪಾದನಾ ಕೃತ್ಯಗಳನ್ನು ಉತ್ತೇಜಿಸುತ್ತಿದೆ ಎಂದು ಗೃಹಸಚಿವಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಂತೆಯೇ ಜಮ್ಮು ಮತ್ತು ಕಾಶ್ಮೀರದೊಳಗೆ ನುಸುಳುವಲ್ಲಿ ಜೆಕೆಜಿಎಫ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರ ಘಜ್ನವಿ ಫೋರ್ಸ್ ಒಳನುಸುಳುವಿಕೆ ಪ್ರಯತ್ನಗಳು, ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮತ್ತು ಕಣಿವೆಯಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ ಎಂದು ಕಂಡುಬಂದಿದೆ. ಸಂಘಟನೆಯು ತನ್ನ ಸದಸ್ಯರನ್ನು ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ತೆಹ್ರೀಕ್-ಉಲ್-ಮುಜಾಹಿದ್ದೀನ್ ಮತ್ತು ಹರ್ಕತ್-ಉಲ್-ಜೆಹಾದ್-ಎ-ಇಸ್ಲಾಮಿಯಂತಹ ಹಲವಾರು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕಿಸುತ್ತಿದೆ ಗೃಹ ಸಚಿವಾಲಯ ಆರೋಪಿಸಿದ್ದು, ಈ ಕಾರಣಕ್ಕೆ ಈ ಎರಡೂ ಸಂಘಟನೆಗಳನ್ನು ಉಗ್ರ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದೆ.

ಈ ಎರಡು ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವುದರೊಂದಿಗೆ, ಕಾಯಿದೆಯ ಇಸ್ಟ್ ಶೆಡ್ಯೂಲ್ ಅಡಿಯಲ್ಲಿ  ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಗಳ ಸಂಖ್ಯೆ ಇದೀಗ 44ಕ್ಕೆ ಏರಿಕೆಯಾಗಿದೆ.

SCROLL FOR NEXT