ದೇಶ

ದೆಹಲಿ ಮೇಯರ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರು ಮತದಾನ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

Nagaraja AB

ನವದೆಹಲಿ: ದೆಹಲಿ ಮೇಯರ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.

ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಮೊದಲ ಸಭೆಯಲ್ಲಿ ಮೇಯರ್ ಚುನಾವಣೆಯನ್ನು ನಡೆಸಬೇಕು, ಮೇಯರ್ ನೇತೃತ್ವದಲ್ಲಿ ಉಪ ಮೇಯರ್ ಚುನಾವಣೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆ ಬಿ ಪಾರ್ದಿವಾಲಾ ಅವರನ್ನೊಳಗೊಂಡ ನ್ಯಾಯ ಪೀಠ ಆದೇಶಿಸಿದೆ.

ಉಭಯ ಕಡೆಯ ವಾದಗಳನ್ನು ಆಲಿಸಿದ್ದು, ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸದಂತೆ ಸಂವಿಧಾನ ನಿರ್ಬಂಧಿಸಿದೆ. ಮೇಯರ್ ಚುನಾವಣೆ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಮೊದಲ ಸಭೆ ನಡೆಸಲು 24 ಗಂಟೆಯೊಳಗೆ ನೋಟಿಸ್ ಹೊರಡಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಶೀಘ್ರದಲ್ಲೇ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಕೋರಿ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಮೇಯರ್ ಆಕಾಂಕ್ಷಿ ಶೆಲಿ ಒಬೆರಾಯ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಈ ಆದೇಶ ಪ್ರಕಟಿಸಿದೆ.

SCROLL FOR NEXT