ದೇಶ

ದೆಹಲಿಯ 123 ವಕ್ಫ್ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಮುಂದು; ವಕ್ಫ್ ಮಂಡಳಿ ವಿರೋಧ

Vishwanath S

ನವದೆಹಲಿ: ದೆಹಲಿ ವಕ್ಫ್ ಮಂಡಳಿಯ 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ. ಈ ವಕ್ಫ್ ಆಸ್ತಿಗಳಲ್ಲಿ ಮಸೀದಿಗಳು, ದರ್ಗಾಗಳು ಮತ್ತು ಸ್ಮಶಾನಗಳು ಸೇರಿವೆ. 

ಕೇಂದ್ರದ ಈ ಕ್ರಮಕ್ಕೆ ಮಂಡಳಿ ಅಧ್ಯಕ್ಷ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವಕ್ಫ್ ಆಸ್ತಿಯನ್ನು ಪಡೆಯಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಖಾನ್ ಒತ್ತಾಯಿಸಿದರು. ಭೂಮಿ ಮತ್ತು ಅಭಿವೃದ್ಧಿ ಕಚೇರಿ (L&DO) ಫೆಬ್ರುವರಿ 8ರಂದು ಮಂಡಳಿಗೆ ಪತ್ರವನ್ನು ಕಳುಹಿಸಿದ್ದು, 123 ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಿಂದ ಅದನ್ನು ಮುಕ್ತಗೊಳಿಸುವ ನಿರ್ಧಾರವನ್ನು ತಿಳಿಸಿದ್ದಾರೆ.

ಸಮಿತಿಯ ಸಲಹೆ ಮೇರೆಗೆ ಕೇಂದ್ರ ಕ್ರಮ ಕೈಗೊಂಡಿದೆ
ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿ(L&DO) ನಿವೃತ್ತ ನ್ಯಾಯಮೂರ್ತಿ ಎಸ್‌ಪಿ ಗರ್ಗ್ ನೇತೃತ್ವದ ದ್ವಿಸದಸ್ಯ ಸಮಿತಿಯು ನೋಟಿಫೈ ಮಾಡದ ವಕ್ಫ್ ಆಸ್ತಿಗಳ ವಿಷಯದ ತನ್ನ ವರದಿಯಲ್ಲಿ ದೆಹಲಿ ವಕ್ಫ್ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಿಲ್ಲ ಎಂದು ಹೇಳಿದೆ. ಯಾವುದೇ ಪ್ರಾತಿನಿಧ್ಯ ಅಥವಾ ಆಕ್ಷೇಪಣೆಯನ್ನು ಸ್ವೀಕರಿಸಲಾಗಿಲ್ಲ. ಎಲ್ & ಡಿಒ ಪತ್ರದ ಪ್ರಕಾರ, ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರವು ಸಮಿತಿಯನ್ನು ರಚಿಸಿತ್ತು.

ಕೇಂದ್ರದ ನಿರ್ಧಾರದಿಂದ ಅಮಾನತುಲ್ಲಾ ಅಸಮಾಧಾನ
ಈ ಬಗ್ಗೆ ಟ್ವೀಟ್ ಮಾಡಿರುವ ಅಮಾನತುಲ್ಲಾ ಖಾನ್, 'ನಾವು ಈಗಾಗಲೇ ನ್ಯಾಯಾಲಯದಲ್ಲಿ 123 ವಕ್ಫ್ ಆಸ್ತಿಗಳ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದೇವೆ. ನಮ್ಮ ರಿಟ್ ಅರ್ಜಿ ಸಂಖ್ಯೆ 1961/2022 ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಈ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ನಿಮ್ಮೆಲ್ಲರ ಮುಂದಿದೆ. ವಕ್ಫ್ ಮಂಡಳಿಯ ಆಸ್ತಿಯನ್ನು ಯಾವುದೇ ರೀತಿಯ ಅತಿಕ್ರಮಣಕ್ಕೆ ನಾವು ಅನುಮತಿಸುವುದಿಲ್ಲ ಎಂದು ಟ್ವೀಟಿಸಿದ್ದಾರೆ.

ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಉಲ್ಲೇಖ
ದ್ವಿಸದಸ್ಯ ಸಮಿತಿ ರಚನೆಯ ವಿರುದ್ಧ ದೆಹಲಿ ವಕ್ಫ್ ಮಂಡಳಿಯು 2022ರ ಜನವರಿಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಮಂಡಳಿಯ ಅಧ್ಯಕ್ಷ ಅಮಾನತುಲ್ಲಾ ಖಾನ್ ಕೇಂದ್ರ ಸಚಿವಾಲಯದ ಉಪ ಭೂ ಮತ್ತು ಅಭಿವೃದ್ಧಿ ಅಧಿಕಾರಿಗೆ ಉತ್ತರಿಸಿದರು. ಈ 123 ಆಸ್ತಿಗಳನ್ನು ಮುಸ್ಲಿಂ ಸಮುದಾಯ ಬಳಸಿಕೊಳ್ಳುತ್ತಿದೆ. ನಿರ್ವಹಣಾ ಸಮಿತಿಗಳು ಅಥವಾ ದೆಹಲಿ ವಕ್ಫ್ ಬೋರ್ಡ್ ನೇಮಿಸಿದ ಮುತವಲ್ಲಿಗಳು ಈ ಆಸ್ತಿಗಳನ್ನು ನೋಡಿಕೊಳ್ಳುತ್ತಾರೆ ಎಂದರು.

SCROLL FOR NEXT