ದೇಶ

ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ಪ್ರಕರಣ: ಸಪ್ನಾ ಗಿಲ್ ಸೇರಿ ನಾಲ್ವರು ಆರೋಪಿಗಳಿಗೆ ಜಾಮೀನು

Srinivasamurthy VN

ಮುಂಬೈ: ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ಸೆಲ್ಫಿ ವಿಚಾರವಾಗಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಪೃಥ್ವಿ ಶಾ ಅವರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಮಾಡೆಲ್ ಸಪ್ನಾ ಗಿಲ್ ಇತರೆ ಮೂರು ಮಂದಿ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ, ಸಪ್ನಾ ಗಿಲ್ ಅವರನ್ನು ನ್ಯಾಯಾಲಯವು ಈ ಹಿಂದೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು, ಆದರೆ ಇದೀಗ ಅವರು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಇತರೆ 3 ಜನರಿಗೂ ಸಹ ನ್ಯಾಯಾಲಯ ಜಾಮೀನು ನೀಡಿದೆ. 

ಈ ಪ್ರಕರಣದಲ್ಲಿ ಪೃಥ್ವಿ ಶಾ ಸ್ನೇಹಿತ ಆಶಿಶ್ ಯಾದವ್ ದೂರು ದಾಖಲಿಸಿದ ನಂತರ, ಓಶಿವಾರ ಪೊಲೀಸರು ಸಪ್ನಾ ಗಿಲ್ ಮತ್ತು ಇತರ 7 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ (143, 148, 149, 384, 437, 504, 506) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಏನಿದು ಪ್ರಕರಣ?
ಇದೇ ಫೆಬ್ರವರಿ 15 ರಂದು, ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರು ತಮ್ಮ ಕೆಲವು ಸ್ನೇಹಿತರೊಂದಿಗೆ ಮುಂಬೈನ ಸಾಂತಾಕ್ರೂಜ್‌ ಹೊಟೆಲ್ ಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಸಪ್ನಾ ಗಿಲ್ ಆಗಲೇ ಆ ರೆಸ್ಟೊರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ತನ್ನ ಸ್ನೇಹಿತರೊಂದಿಗೆ ಇದ್ದರು. ಈ ವೇಳೆ ಪೃಥ್ವಿ ಶಾ ಇರುವಿಕೆ ಗಮನಿಸಿದ್ದ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಪೃಥ್ವಿ ಶಾ ಸೆಲ್ಫಿ ತೆಗೆದುಕೊಳ್ಳದಂತೆ ತಡೆದರು. ಈ ವೇಳೆ ಕೋಪಗೊಂಡ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಗಲಾಟೆ ಆರಂಭಿಸಿದ್ದಾರೆ. ಇದು ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪೃಥ್ವಿ ಶಾ ರೆಸ್ಟೋರೆಂಟ್ ನಿಂದ ಹೊರಗೆ ಬಂದು ಕಾರಿನಲ್ಲಿ ಹೋಗಲು ಮುಂದಾಗಿದ್ದಾರೆ. ಈ ವೇಳೆ ಕಾರನ್ನು ತಡೆದು ಬೇಸ್ ಬಾಲ್ ಸ್ಟಿಕ್ ನಿಂದ ಕಾರಿನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿದೆ.

ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರನ್ನು ಬಂಧಿಸಿದ್ದರು. 

ಇಷ್ಟಕ್ಕೂ ಸಪ್ನಾ ಗಿಲ್ ಯಾರು?
ಸಪ್ನಾ ಗಿಲ್ ಅವರು ಚಂಡೀಗಢದ ನಿವಾಸಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ರೀಲ್ಸ್ ಗಳ ಮೂಲಕ ವ್ಯಾಪಕ ಖ್ಯಾತಿಗಳಿಸಿದ್ದಾರೆ. ಇದರ ಜೊತೆಗೆ ಸಪ್ನಾ ಗಿಲ್ ಅವರು ಕೆಲವು ಭೋಜ್‌ಪುರಿ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಸಪ್ನಾ ಸೋಷಿಯಲ್ ಮೀಡಿಯಾದಲ್ಲಿ 2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ಮಾಡೆಲ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
 

SCROLL FOR NEXT