ದೇಶ

ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆ: ಚುನಾವಣಾ ಆಯೋಗದ ನಿರ್ಧಾರಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ!

Vishwanath S

ನವದೆಹಲಿ: ಏಕನಾಥ್ ಶಿಂಧೆ ಬಣವನ್ನು ಅಧಿಕೃತ ಶಿವಸೇನೆ ಎಂದು ಗುರುತಿಸಿರುವ ಭಾರತದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. 

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ 3 ನ್ಯಾಯಾಧೀಶರ ಪೀಠ, ಚುನಾವಣಾ ಆಯೋಗಕ್ಕೆ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಆದಾಗ್ಯೂ, ನ್ಯಾಯ ಪೀಠವು ಉದ್ಧವ್ ಠಾಕ್ರೆ ಗುಂಪಿನ ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಹೆಸರು ಮತ್ತು ಚಿಹ್ನೆ ಟಾರ್ಚ್ ಅನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಫೆಬ್ರವರಿ 26ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಉಪಚುನಾವಣೆ ದೃಷ್ಟಿಯಿಂದ ಇಸಿಐ ಮಧ್ಯಂತರ ವ್ಯವಸ್ಥೆಗೆ ಅನುಮತಿ ನೀಡಿತ್ತು.

ನಿಮ್ಮ ಮತ್ತು ಇತರ ಕಡೆಯ ವಾದವನ್ನು ಆಲಿಸದೆ ನಾವು ಯಾವುದೇ ನಿರ್ಧಾರವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅದೇನೆಂದರೆ, ಶಿವಸೇನೆಯ ಚಿಹ್ನೆ ಮತ್ತು ಹೆಸರನ್ನು ಬಳಸುವ ಹಕ್ಕು ಸದ್ಯಕ್ಕೆ ಏಕನಾಥ್ ಶಿಂಧೆ ಬಣಕ್ಕೆ ಇರುತ್ತದೆ. ಅಂದಹಾಗೆ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗ ಮತ್ತು ಶಿಂಧೆ ಬಣಕ್ಕೆ ನೋಟಿಸ್ ಜಾರಿ ಮಾಡಿದ್ದು, ಈ ವಿಚಾರದಲ್ಲಿ ಉತ್ತರ ಕೇಳಿದೆ. ಎರಡು ವಾರಗಳ ನಂತರ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ. ಒಂದೆಡೆ ನ್ಯಾಯಾಲಯದ ಈ ನಿರ್ಧಾರ ಶಿಂಧೆ ಗುಂಪಿಗೆ ಬಿಗ್ ರಿಲೀಫ್ ಆಗಿದ್ದರೆ, ಮತ್ತೊಂದೆಡೆ ಉದ್ಧವ್ ಠಾಕ್ರೆಗೆ ಮತ್ತೊಮ್ಮೆ ನಿರಾಸೆ ಮೂಡಿಸಲಿದೆ.

ಉದ್ಧವ್ ಠಾಕ್ರೆ ಗುಂಪಿನ ಬೇಡಿಕೆ
ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಏಕನಾಥ್ ಶಿಂಧೆ ಬಣ ಶಿವಸೇನೆ ಹೆಸರು ಮತ್ತು ಚಿಹ್ನೆಯನ್ನು ಬಳಸದಂತೆ ತಡೆಯಬೇಕು ಎಂದು ಉದ್ಧವ್ ಠಾಕ್ರೆ ಬಣ ಆಗ್ರಹಿಸಿತ್ತು. ಈ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಉದ್ಧವ್ ಠಾಕ್ರೆ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್, ಚುನಾವಣಾ ಆಯೋಗದ ನಿರ್ಧಾರದ ಆಧಾರ ದುರ್ಬಲವಾಗಿದೆ. ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ತಡೆ ನೀಡಬೇಕು. ಚುನಾವಣಾ ಆಯೋಗದ ಈ ನಿರ್ಧಾರ ತೀವ್ರ ಕಳವಳ ಮೂಡಿಸಿದೆ ಎಂದರು.

ತಜ್ಞರು ಏನು ಹೇಳುತ್ತಾರೆ?
ಏತನ್ಮಧ್ಯೆ, ಕಾನೂನು ತಜ್ಞರ ಪ್ರಕಾರ, ಯಾವುದೇ ಪಕ್ಷದ ಚಿಹ್ನೆ ಮತ್ತು ಹೆಸರನ್ನು ನಿರ್ಧರಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಧವ್ ಠಾಕ್ರೆ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಪರಿಹಾರ ಸಿಗುವ ಭರವಸೆ ಇಲ್ಲ. ಗಮನಾರ್ಹವೆಂದರೆ, ಏಕನಾಥ್ ಶಿಂಧೆ ಬಣ ಇದೀಗ ಪಕ್ಷದ ಕಚೇರಿಯ ಮೇಲೂ ಹಕ್ಕು ಚಲಾಯಿಸಿದೆ. ಈಗ ನಮ್ಮನ್ನು ಶಿಂಧೆ ಬಣ ಎಂದು ಕರೆಯಬಾರದು. ನಾವು ಈಗ ನಿಜವಾದ ಶಿವಸೇನೆ ಎಂದು ಅವರು ಹೇಳುತ್ತಾರೆ.

SCROLL FOR NEXT