ದೇಶ

ಪವನ್ ಖೇರಾ ಅವರನ್ನು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ: ಕಾಂಗ್ರೆಸ್ ಆರೋಪ

Ramyashree GN

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಪಾದಿತ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ರಾಯ್‌ಪುರಕ್ಕೆ ತೆರಳಬೇಕಿದ್ದ ವಿಮಾನದಿಂದ ಕೆಳಗಿಳಿಸಿದ ನಂತರ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಪಕ್ಷ ತಿಳಿಸಿದೆ.

ಖೇರಾ ವಿರುದ್ಧ ಅಸ್ಸಾಂನಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ವಿಮಾನದಿಂದ ಕೆಳಗಿಳಿಸುವಂತೆ ದೆಹಲಿ ಪೊಲೀಸರು ಕೇಳಿದ್ದರು.
ಅರೆಸ್ಟ್ ವಾರೆಂಟ್ ಇಲ್ಲದೇ ಅವರನ್ನು ಕರೆದುಕೊಂಡು ಹೋಗಲು ಬಿಡದೆ ಪ್ರತಿಭಟಿಸಿ ಕಾಂಗ್ರೆಸ್ ಮುಖಂಡರು ಧರಣಿ ಕುಳಿತರು.

ನಂತರ ಖೇರಾ ಬಂಧನಕ್ಕೆ ಸಹಾಯ ಕೋರಿ ಅಸ್ಸಾಂ ಪೊಲೀಸರು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದಾಖಲೆಯನ್ನು ಹಸ್ತಾಂತರಿಸಿದರು.

ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರು ಖೇರಾ ಅವರೊಂದಿಗೆ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಬಂದರು. ಅಲ್ಲಿ ಸಿಐಎಸ್‌ಎಫ್‌ನ ಭಾರಿ ನಿಯೋಜನೆ ಇತ್ತು.

ಅಸ್ಸಾಂನ ಹಫ್ಲಾಂಗ್ ಪೊಲೀಸ್ ಠಾಣೆಯಲ್ಲಿ ಖೇರಾ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮುನ್ನ ಪಕ್ಷದ ಹಲವು ಮುಖಂಡರು ಖೇರಾ ಅವರನ್ನು ವಿಮಾನದಿಂದ ಕೆಳಗಿಳಿಸಿದ್ದಕ್ಕೆ ಧರಣಿ ನಡೆಸಿದರು. ಖೇರಾ ಕಾಂಗ್ರೆಸ್ ಮಹಾಧಿವೇಶನಕ್ಕಾಗಿ ರಾಯಪುರಕ್ಕೆ ತೆರಳುತ್ತಿದ್ದರು.

ಇಲ್ಲಿನ ದೇಶೀಯ ವಿಮಾನ ನಿಲ್ದಾಣದ ಟರ್ಮಿನಲ್ ಒಂದರಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ, ಖೇರಾ ಅವರ ಬ್ಯಾಗ್‌ಗಳಿಗೆ ಸಂಬಂಧಿಸಿದಂತೆ ಗೊಂದಲವಿದೆ. ಪೊಲೀಸರು ಬರುತ್ತಿದ್ದಾರೆ ಮತ್ತು ಖೇರಾ ಅವರಿಗೆ ಅವರು ಕಾರಣವನ್ನು ವಿವರಿಸುತ್ತಾರೆ ಎಂದು ವಿಮಾನ ಸಿಬ್ಬಂದಿ ಕಾಂಗ್ರೆಸ್ ನಾಯಕರಿಗೆ ತಿಳಿಸಿದರು.

'ನಾವೆಲ್ಲರೂ ಇಂಡಿಗೋ 6E ಫ್ಲೈಟ್ 6E 204 ನಲ್ಲಿ ರಾಯ್‌ಪುರಕ್ಕೆ ಹೋಗುತ್ತಿದ್ದೆವು ಮತ್ತು ಇದ್ದಕ್ಕಿದ್ದಂತೆ ನನ್ನ ಸಹೋದ್ಯೋಗಿ ಪವನ್ ಖೇರಾ ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಇದು ಯಾವ ರೀತಿಯ ಕ್ರಮ ಕೈಗೊಳ್ಳುವಿಕೆ? ಯಾವುದೇ ಕಾನೂನಿನಲ್ಲಿ ನಿಯಮವಿದೆಯೇ? ಯಾವ ಆಧಾರದ ಮೇಲೆ ಮತ್ತು ಯಾರ ಆದೇಶದ ಅಡಿಯಲ್ಲಿ ಇದನ್ನು ಮಾಡಲಾಗುತ್ತಿದೆ?' ಎಂದು ವಿಮಾನದಲ್ಲಿದ್ದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಇದರಿಂದಾಗಿ ವಿಮಾನ ಹೊರಡುವುದು ತಡವಾಯಿತು.

SCROLL FOR NEXT