ದೇಶ

ಸುಪ್ರೀಂ ಕೋರ್ಟ್ ನಲ್ಲಿ ಪಳನಿಸ್ವಾಮಿಗೆ ಜಯ- ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಕೆ, ಪನ್ನೀರ್ ಸೆಲ್ವಂ ಅರ್ಜಿ ವಜಾ

Sumana Upadhyaya

ನವದೆಹಲಿ: ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ (EPS) ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಯ ಸಿಕ್ಕಿದೆ. ಮದ್ರಾಸ್ ಹೈಕೋರ್ಟ್‌ ಕಳೆದ ಸೆಪ್ಟೆಂಬರ್ ನಲ್ಲಿ  ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಓ ಪನ್ನೀರಸೆಲ್ವಂ (OPS) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

 ಓ ಪನ್ನೀರಸೆಲ್ವಂಗೆ (O Panneerselvam) ಭಾರೀ ಹಿನ್ನಡೆ ಉಂಟಾಗಿದ್ದು, ಎಐಎಡಿಎಂಕೆ ಮುಖ್ಯಸ್ಥರಾಗಿ ಉಳಿಯಲು ಪ್ರತಿಸ್ಪರ್ಧಿ ಇಪಿಎಸ್‌ಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದೆ. ಇ ಪಳನಿಸ್ವಾಮಿ (Edappadi K Palaniswami) ಅವರು ಎಐಎಡಿಎಂಕೆ ಮುಖ್ಯಸ್ಥರಾಗಿ ಉಳಿಯಲು ಅವಕಾಶ ಮಾಡಿಕೊಟ್ಟಿದೆ.

ಇದರಿಂದ ಇ ಪಳನಿಸ್ವಾಮಿಯವರು ಪಕ್ಷದ ಏಕೈಕ ನಾಯಕರಾಗಿ ಮತ್ತೆ ಹೊಮ್ಮಲಿದ್ದಾರೆ. ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಹೃಷಿಕೇಶ್ ರಾಯ್ ಅವರ ನೇತೃತ್ವದ ನ್ಯಾಯಪೀಠವು ಹೈಕೋರ್ಟ್ ನ ಆದೇಶವನ್ನು ದೃಢೀಕರಿಸುವಾಗ ಜುಲೈ 6, 2022 ರ ಆದೇಶವನ್ನು ಎತ್ತಿಹಿಡಿದಿದೆ. 

2016ರ ಡಿಸೆಂಬರ್ ನಲ್ಲಿ  ಜೆ ಜಯಲಲಿತಾ ಅವರ ಸಾವಿನ ನಂತರ ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಮಧ್ಯೆ ಪಕ್ಷದಲ್ಲಿ ಅಧಿಕಾರ ಮತ್ತು ಉನ್ನತ ಸ್ಥಾನಕ್ಕಾಗಿ ಉಂಟಾದ ಕೋಲಾಹಲ ಇತ್ತೀಚಿಗೆ ಮಹತ್ವದ ತಿರುವು ಪಡೆದುಕೊಂಡಿತ್ತು. ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್ ಇಪಿಎಸ್ ಅವರ ಮೇಲ್ಮನವಿಯನ್ನು ಅಂಗೀಕರಿಸಿತು, ಜುಲೈ ಸಭೆಯಲ್ಲಿ ಪಕ್ಷದಿಂದ ತೆಗೆದುಹಾಕಲ್ಪಟ್ಟ ಓ ಪನ್ನೀರಸೆಲ್ವಂ ಪರವಾಗಿ ಆದೇಶವನ್ನು ರದ್ದುಗೊಳಿಸಿತ್ತು. 

ಎಐಎಡಿಎಂಕೆಯ ಪ್ರಧಾನ ಕಚೇರಿಯಾದ ಎಂಜಿಆರ್ ಮಾಳಿಗೈಯಲ್ಲಿ ಹೆಚ್ಚಿದ ಪೊಲೀಸ್ ಉಪಸ್ಥಿತಿಯ ನಡುವೆ, ಇಪಿಎಸ್ ಬೆಂಬಲಿಗರು ಪಟಾಕಿ ಸಿಡಿಸಿ ಅವರ ಕಟೌಟ್ ಗೆ ಹಾಲು ಎರೆದು ಸಂಭ್ರಮಿಸಿದರು. ಎಐಎಡಿಎಂಕೆಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಡಿ ಜಯಕುಮಾರ್, 'ಪಾಂಡವರು' ಮತ್ತು 'ಕೌರವರ' ನಡುವಿನ ಯುದ್ಧದಲ್ಲಿ ಪಾಂಡವರು ಗೆಲ್ಲುತ್ತಾರೆ. ಸುಪ್ರೀಂ ತೀರ್ಪನ್ನು ಐತಿಹಾಸಿಕ ತೀರ್ಪು ಎಂದು ಬಣ್ಣಿಸಿದರು. ಪನೀರ್‌ಸೆಲ್ವಂ ಅವರ ರಾಜಕೀಯ ಭವಿಷ್ಯವೇನು ಎಂಬ ಪ್ರಶ್ನೆಗೆ ಜಯಕುಮಾರ್‌ ‘ಶೂನ್ಯ’ ಎಂದು ಸನ್ನೆ  ಮಾಡಿ ತೋರಿಸಿದರು. 

SCROLL FOR NEXT