ದೇಶ

ಸ್ಥಾಯಿ ಸಮಿತಿ ಚುನಾವಣೆ: ಎಂಸಿಡಿ ಹೌಸ್ ನಲ್ಲಿ ಗಲಾಟೆ, ಹಲ್ಲೆ; ಫೆಬ್ರವರಿ 27ಕ್ಕೆ ಮರು ಚುನಾವಣೆ

Nagaraja AB

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ (ಎಂಸಿಡಿ) ಸದನದಲ್ಲಿ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್ ಗಳ ನಡುವೆ ಮತ್ತೆ ಘರ್ಷಣೆ ನಡೆದಿದೆ. ಶುಕ್ರವಾರ ಪ್ರಮುಖ ಆರು ಸದಸ್ಯರ ಸ್ಥಾಯಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಮೇಯರ್ ಶೆಲ್ಲಿ ಒಬೆರಾಯ್ ಒಂದು ಮತವನ್ನು ಅಸಿಂಧುಗೊಳಿಸುತ್ತಿದ್ದಂತೆಯೇ  ಉಭಯ ಪಕ್ಷಗಳ ಕೌನ್ಸಿಲರ್ ಗಳು ಕೂಗಾಟದ ನಡುವೆ ಪರಸ್ಪರ ತಳ್ಳಾಟ, ನೂಕಾಟ ನಡೆದು ಹೊಡೆದಾಡಿಕೊಂಡಿದ್ದಾರೆ. 

ಗದ್ದಲದ ವೇಳೆ ಎಂಸಿಡಿ ಸದನದ ಕಲಾಪವನ್ನು ಫೆ.27ರವರೆಗೂ ಮುಂದೂಡುವಂತೆ ಒತ್ತಾಯಿಸುತ್ತಿದ್ದಾಗ ಕೌನ್ಸಿಲರ್ ಅಶೋಕ್ ಮನು ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಚುನಾವಣೆಯಲ್ಲಿ ನಮ್ಮ ಪಕ್ಷ ಸೋಲುತ್ತದೆ ಎಂದು ಭಾವಿಸಿ ಬಿಜೆಪಿ ಕೌನ್ಸಿಲರ್ ಗಳು ದೆಹಲಿ ಮೇಯರ್ ಮೇಲೆ ಹಲ್ಲೆ ನಡೆಸಿದ್ದು, ಅವರು ಸದನದಿಂದ ಹೊರ ಹೋಗುವಂತೆ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಶಾಸಕಿ ಅತಿಶಿ ಆರೋಪಿಸಿದರು. 

ಇಂದು ಕರಾಳ ದಿನ. ಸಂವಿಧಾನವನ್ನು ಅಪಹಾಸ್ಯ ಮಾಡಲಾಗಿದೆ. ನಾವು ಬಿಜೆಪಿ ಕೌನ್ಸಿಲರ್‌ಗಳನ್ನು ಕರೆದು ಅವರ ಬೇಡಿಕೆಗಳ ಬಗ್ಗೆ ಕೇಳಿದ್ದು, ಮರು ಚುನಾವಣೆ ಮಾಡಿದ್ದೇವೆ. ಆದರೆ ಅವರು  ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಮೇಯರ್ ಒಬೆರಾಯ್ ಸುದ್ದಿಗಾರರಿಗೆ ತಿಳಿಸಿದರು.

ಎಲ್ಲಾ ಬ್ಯಾಲೆಟ್ ಪತ್ರಗಳನ್ನು ಹಾರಿದು ಹಾಕಲಾಗಿದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸ್ಥಾಯಿ ಸಮಿತಿಯ ಚುನಾವಣೆಯನ್ನು ಮತ್ತೆ ಫೆಬ್ರವರಿ 27 ರಂದು ನಡೆಸಲಾಗುವುದು ಎಂದು ಮೇಯರ್  ಹೇಳಿದರು. ಮೇಯರ್ ಸದನವನ್ನು ಮುಂದೂಡಿದ್ದಕ್ಕೆ ಬಿಜೆಪಿ ಹಾಗೂ ಎಎಪಿ ಸದಸ್ಯರು ಪರಸ್ಪರ ಆರೋಪಿಸಿದರು. 

ವೀಡಿಯೋವೊಂದರಲ್ಲಿ, ಎರಡೂ ಪಕ್ಷಗಳ ಕೌನ್ಸಿಲರ್‌ಗಳು ಸದನದೊಳಗೆ ನೀರಿನ ಬಾಟಲಿಗಳು ಮತ್ತು ಸೇಬುಗಳನ್ನು ಪರಸ್ಪರ ಎಸೆದಿರುವುದು ಕಂಡುಬಂದರೆ, ಮತ್ತೊಂದರಲ್ಲಿ ಮಹಿಳಾ ಕೌನ್ಸಿಲರ್‌ಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಫೆಬ್ರವರಿ 23 ರಂದು ನಡೆದ ಚುನಾವಣೆಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. 

SCROLL FOR NEXT