ದೇಶ

ಸಿಬಿಐನಿಂದ ಮನೀಶ್ ಸಿಸೋಡಿಯಾ ವಿಚಾರಣೆ: ತನಿಖಾ ಸಂಸ್ಥೆಯ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ಆಪ್ ಮುಖಂಡರ ಬಂಧನ

Ramyashree GN

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಪ್ರಶ್ನಿಸುತ್ತಿರುವ ಸಿಬಿಐ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ಸಂಜಯ್ ಸಿಂಗ್ ಮತ್ತು ಗೋಪಾಲ್ ರೈ ಸೇರಿದಂತೆ ಹಲವು ಎಎಪಿ ನಾಯಕರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ಬಂಧನವನ್ನು ದೃಢಪಡಿಸಿದ ಎಎಪಿ ಶಾಸಕ ಕುಲದೀಪ್ ಕುಮಾರ್, 'ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವು. ಆದರೆ, ಬಂಧಿಸಲಾಯಿತು ಎಂದಿದ್ದಾರೆ. 

ಹಿಂದಿಯಲ್ಲಿ ಟ್ವೀಟ್ ಮಾಡಿರುವ ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಾಲ್ ರೈ, 'ಮೋದಿ ಜಿ ಅವರ ಗೂಂಡಾಗಿರಿ ಉತ್ತುಂಗದಲ್ಲಿದೆ. ಯಾರ ಸಹಾಯವಿಲ್ಲದೆ ನಾನು ನಡೆಯಲು ಸಾಧ್ಯವಿಲ್ಲ. ಆದರೆ, ಪೊಲೀಸರು ಎಲ್ಲಾ ಕಡೆಯಿಂದ ನನ್ನ ಕಾರನ್ನು ಸುತ್ತುವರೆದರು ಮತ್ತು ನನ್ನ ಜೊತೆಗಿದ್ದ ವ್ಯಕ್ತಿಯನ್ನು ಬಲವಂತವಾಗಿ ಕೆಳಗಿಳಿಸಿದರು. ಪೊಲೀಸರು ನನ್ನ ಕಾರಿನೊಳಗೆ ನುಗ್ಗಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಇದು ಗೂಂಡಾಗಿರಿಯ ಪರಮಾವಧಿ. ಆದರೆ, ಇದಕ್ಕೆಲ್ಲ ನಾವು ಹೆದರುವುದಿಲ್ಲ ಮತ್ತು ಸಲಾಂ ಹೊಡೆಯುವುದಿಲ್ಲ' ಎಂದಿದ್ದಾರೆ.

ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರ ಎರಡನೇ ಸುತ್ತಿನ ವಿಚಾರಣೆಯನ್ನು ಸಿಬಿಐ ಭಾನುವಾರ ಆರಂಭಿಸಿದೆ. ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದ ನಂತರ ಅವರು ಭಾರಿ ಬ್ಯಾರಿಕೇಡ್‌ಗಳಿರುವ ಸಿಬಿಐ ಕಚೇರಿಗೆ ಆಗಮಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಸಿಸೋಡಿಯಾ ಅವರನ್ನು ಚಾರ್ಜ್ ಶೀಟ್‌ನಲ್ಲಿ ಆರೋಪಿ ಎಂದು ಹೆಸರಿಸಿಲ್ಲ. ಏಕೆಂದರೆ, ಕೇಂದ್ರ ತನಿಖಾ ಸಂಸ್ಥೆ ಅವರು ಮತ್ತು ಇತರ ಶಂಕಿತರು ಮತ್ತು ಆರೋಪಿಗಳ ವಿರುದ್ಧದ ತನಿಖೆಯನ್ನು ಮುಕ್ತವಾಗಿರಿಸಿದೆ ಎಂದು ಅವರು ಹೇಳಿದರು.

SCROLL FOR NEXT