ದೇಶ

ಭಾರತದ 'ಯುಪಿಐ' ವ್ಯವಸ್ಥೆಗೆ ಹಲವು ರಾಷ್ಟ್ರಗಳು ಆಕರ್ಷಿತವಾಗಿವೆ: 'ಮನ್ ಕಿ ಬಾತ್''ನಲ್ಲಿ ಪ್ರಧಾನಿ ಮೋದಿ

Manjula VN

ನವದೆಹಲಿ: ದೇಶದ ಡಿಜಿಟಲ್ ಪ್ರಗತಿಯನ್ನು ಕೊಂಡಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಭಾರತದ ಯುಪಿಐ' ವ್ಯವಸ್ಥೆಗೆ ವಿಶ್ವದ ಹಲವು ರಾಷ್ಟ್ರಗಳು ಆಕರ್ಷಿತವಾಗಿವೆ ಎಂದು ಭಾನುವಾರ ಹೇಳಿದರು.

'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮದ 98 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವ್ಯವಸ್ಥೆ ಮತ್ತು ಇ-ಸಂಜೀವಿನಿ ಆ್ಯಪ್ ಡಿಜಿಟಲ್ ಇಂಡಿಯಾ ಶಕ್ತಿಗೆ ಪ್ರಬಲ ಉದಾಹರಣೆಗಳಾಗಿವೆ ಎಂದು ಹೇಳಿದರು.

"ಪ್ರಪಂಚದ ಹಲವು ರಾಷ್ಟ್ರಗಳು ಭಾರತದ ಯುಪಿಐ ವ್ಯವಸ್ಥೆ ಕಡೆಗೆ ಆಕರ್ಷಿತವಾಗಿವೆ. ಕೆಲವೇ ದಿನಗಳ ಹಿಂದೆ, ಭಾರತ ಮತ್ತು ಸಿಂಗಾಪುರದ ನಡುವೆ UPI-PayNow ಲಿಂಕ್ ಅನ್ನು ಪ್ರಾರಂಭಿಸಲಾಗಿದೆ. ಈಗ, ಸಿಂಗಾಪುರ್ ಮತ್ತು ಭಾರತದ ಜನರು ತಮ್ಮ ಮೊಬೈಲ್ ಫೋನ್‌ಗಳಿಂದ ಹಣವನ್ನು ವರ್ಗಾಯಿಸಬಬಹುದಾಗಿದೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಇ-ಸಂಜೀವಿನಿ ಆ್ಯಪ್ ಜನರಿಗೆ ಒಂದು ದೊಡ್ಡ ವರವಾಗಿ ಸಾಬೀತಾಗಿದ್ದನ್ನು ಇಡೀ ದೇಶ ನೋಡಿದೆ. ಇದು ಡಿಜಿಟಲ್ ಇಂಡಿಯಾದ ಶಕ್ತಿಗೆ ಜ್ವಲಂತ ಉದಾಹರಣೆಯಾಗಿದೆ ಎಂದು ತಿಳಿಸಿದರು.

“ಈ ಆಪ್ ಮೂಲಕ ಟೆಲಿ ಕನ್ಸಲ್ಟೇಶನ್ ಅಂದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಿಮ್ಮ ಅನಾರೋಗ್ಯದ ಬಗ್ಗೆ ವೈದ್ಯರನ್ನು ಸಂಪರ್ಕಿಸಬಹುದಾಗಿದೆ. ಇಲ್ಲಿಯವರೆಗೆ ಈ ಆ್ಯಪ್ ಬಳಸುವ ಟೆಲಿ ಕನ್ಸಲ್ಟೆಂಟ್ ಗಳ ಸಂಖ್ಯೆ 10 ಕೋಟಿ ದಾಟಿದೆ. ರೋಗಿಯ ಮತ್ತು ವೈದ್ಯರ ನಡುವಿನ ಈ ಅದ್ಭುತ ಬಾಂಧವ್ಯ ಒಂದು ದೊಡ್ಡ ಸಾಧನೆಯಾಗಿದೆ. ಈ ಸಾಧನೆಗಾಗಿ ನಾನು ಈ ಸೌಲಭ್ಯವನ್ನು ಪಡೆದ ಎಲ್ಲಾ ವೈದ್ಯರು ಮತ್ತು ರೋಗಿಗಳನ್ನು ಅಭಿನಂದಿಸುತ್ತೇನೆ. ಭಾರತದ ಜನರು ತಂತ್ರಜ್ಞಾನವನ್ನು ಹೇಗೆ ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದಾರೆ ಎಂಬುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಸಿಕ್ಕಿಂನ ಡಾ ಮದನ್ ಮಣಿ ಅವರೊಂದಿಗೆ ಮಾತನಾಡಿದರು.

ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ನಿವಾಸಿ ಮದನ್ ಮೋಹನ್ ಅವರೊಂದಿಗೆ ಮಾತನಾಡಿದ ಮೋದಿಯವರು, ಇ-ಸಂಜೀವಿನಿ ಆ್ಯಪ್ ಮೂಲಕ ಟೆಲಿಕನ್ಸಲ್ಟೇಶನ್‌ನ ಪ್ರಯೋಜನದ ಕುರಿತು ಮಾಹಿತಿಗಳನ್ನು ಪಡೆದುಕೊಂಡರು.

ಪ್ರಧಾನಮಂತ್ರಿಯವರು 'ಮನ್ ಕಿ ಬಾತ್' ನಲ್ಲಿ ಭಾರತದ ಆಟಿಕೆಗಳು ಮತ್ತು ಕಥೆ ಹೇಳುವ ರೂಪಗಳ ಬಗ್ಗೆಯೂ ಮಾತನಾಡಿದರು. ದೇಶದ ಜನತೆ 'ಮನ್ ಕಿ ಬಾತ್' ಅನ್ನು ಅದ್ಭುತ ವೇದಿಕೆಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಭಾರತೀಯ ಗೊಂಬೆಗಳು ಎಷ್ಟು ಕ್ರೇಜ್ ಆಗಿವೆ ಎಂದರೆ ಹೊರ ದೇಶಗಳಲ್ಲೂ ಅವುಗಳ ಬೇಡಿಕೆ ಹೆಚ್ಚಾಗಿದೆ ಎಂದರು.

SCROLL FOR NEXT