ದೇಶ

ಮೇಘಾಲಯ, ನಾಗಲ್ಯಾಂಡ್ ವಿಧಾನಸಭೆ ಚುನಾವಣೆ ಮತದಾನ ಪ್ರಗತಿಯಲ್ಲಿ: ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸುವಂತೆ ಪ್ರಧಾನಿ ಮೋದಿ ಮನವಿ

Sumana Upadhyaya

ಕೊಹಿಮಾ/ಶಿಲ್ಲಾಂಗ್‌ : ನಾಗಾಲ್ಯಾಂಡ್‌ ಮತ್ತು ಮೇಘಾಲಯ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸೋಮವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಎರಡೂ ರಾಜ್ಯಗಳಲ್ಲಿ ತಲಾ 60 ಕ್ಷೇತ್ರಗಳಿದ್ದು, ಎರಡರಲ್ಲೂ ತಲಾ 1 ಕಡೆ ಅವಿರೋಧ ಆಯ್ಕೆ ನಡೆದಿದೆ. 
ಈ ಹಿನ್ನೆಲೆಯಲ್ಲಿ 59 ಕ್ಷೇತ್ರದಲ್ಲಿ ಮಾತ್ರ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಜನರು ಈಗಾಗಲೇ ಸಾಲುಗಟ್ಟಿ ತಮ್ಮ ಹಕ್ಕನ್ನು ಸಾಧಿಸಲು ಮತಗಟ್ಟೆಗಳ ಮುಂದೆ ನಿಂತಿದ್ದಾರೆ.

ಮೇಘಾಲಯದಲ್ಲಿ (Meghalaya) ಹಾಲಿ ಬಿಜೆಪಿ (BJP) -ಎನ್‌ಪಿಪಿ (NPP) ಅಧಿಕಾರದಲ್ಲಿದ್ದರೂ, ಈ ಸಲ ಎರಡೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಿವೆ. ಇದರ ಜತೆಗೆ ತೃಣಮೂಲ ಕಾಂಗ್ರೆಸ್‌ (Trinamool Congress) ಕೂಡ ಕಣದಲ್ಲಿದೆ. ಹೀಗಾಗಿ ತ್ರಿಕೋನ ಸಮರ ಏರ್ಪಟ್ಟಿದೆ.

ನಾಗಲ್ಯಾಂಡ್ ಚುನಾವಣೆ: ಇನ್ನು ನಾಗಾಲ್ಯಾಂಡ್‌ನಲ್ಲಿ (Nagaland) ಹಾಲಿ ಅಧಿಕಾರದಲ್ಲಿರುವ ಎನ್‌ಡಿಪಿಪಿ (NDPP) ಹಾಗೂ ಬಿಜೆಪಿ (BJP)ಮೈತ್ರಿಕೂಟ ಮತ್ತೆ ಸ್ಪರ್ಧಿಸುತ್ತಿದೆ. ಕಾಂಗ್ರೆಸ್‌ (Congress) ಹಾಗೂ ಇತರ ಪ್ರಾದೇಶಿಕ ಪಕ್ಷಗಳೂ ಕಣದಲ್ಲಿವೆ.

ನಾಗಾಲ್ಯಾಂಡ್‌ನಲ್ಲಿ ಒಟ್ಟು 13 ಲಕ್ಷ ಮಂದಿ ಮತ ಚಲಾಯಿಸಲು ಅರ್ಹತೆಯನ್ನು ಪಡೆದುಕೊಂಡಿದ್ದು, ಕಣದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 183 ಅಭ್ಯರ್ಥಿಗಳಿದ್ದಾರೆ. ಇದರಲ್ಲಿ 19 ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ. ಒಟ್ಟು 60 ವಿಧಾನಸಭಾ ಕ್ಷೇತ್ರಗಳಿರುವ ನಾಗಾಲ್ಯಾಂಡ್‌ನಲ್ಲಿ ಅಕುಲುಟೋ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಹಾಲಿ ಬಿಜೆಪಿ ಶಾಸಕ ಕಜೇಟೋ ಕಿನಿಮಿ ಪ್ರತಿಸ್ಪರ್ಧಿಗಳಿಲ್ಲದೇ ಗೆಲುವು ಸಾಧಿಸಿದ್ದಾರೆ.

ನಾಗಾಲ್ಯಾಂಡ್‌ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರಕ್ಕೆ ಶನಿವಾರ ತೆರೆಬಿದ್ದಿತ್ತು. ಈ ಎರಡು ರಾಜ್ಯಗಳಲ್ಲೂ ಮಾರ್ಚ್‌ 2ರಂದು ಫಲಿತಾಂಶ ಪ್ರಕಟವಾಗಲಿದೆ. 

ಮತದಾರರಿಗೆ ಪ್ರಧಾನಿ ಮನವಿ: ಮೇಘಾಲಯ ಮತ್ತು ನಾಗಾಲ್ಯಾಂಡ್ ಎರಡೂ ರಾಜ್ಯಗಳ ಮತದಾರರು ವಿಶೇಷವಾಗಿ ಮೊದಲ ಬಾರಿ ಮತ ಚಲಾಯಿಸುವವರು ಮತ್ತು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

SCROLL FOR NEXT