ದೇಶ

ಕೇರಳದ ಆದಿಮಾಲಿಯಲ್ಲಿ ಕಮರಿಗೆ ಬಿದ್ದ ಕಾಲೇಜು ವಿದ್ಯಾರ್ಥಿಗಳ ಪ್ರವಾಸಿ ಬಸ್: ಓರ್ವ ಸಾವು, 44 ಮಂದಿಗೆ ಗಾಯ

Sumana Upadhyaya

ಇಡುಕ್ಕಿ: ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಬಳಿ ಭಾನುವಾರ ನಸುಕಿನ ಜಾವ ಪ್ರವಾಸಿ ಬಸ್ ಕಮರಿಗೆ ಬಿದ್ದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದು, ಸಿಬ್ಬಂದಿ ಸೇರಿದಂತೆ 44 ಮಂದಿ ಗಾಯಗೊಂಡಿದ್ದಾರೆ. ಬಸ್ ಮಲಪ್ಪುರಂನ ತಿರೂರ್‌ನಲ್ಲಿರುವ ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ (ITI) ವಿದ್ಯಾರ್ಥಿಗಳನ್ನು ವಿಹಾರಕ್ಕೆ ಕರೆದೊಯ್ದು ಹಿಂತಿರುಗುತ್ತಿತ್ತು.

ಕಲ್ಲರಕುಟ್ಟಿ-ಮೈಲಾಡುಂಪಾರ ಮಾರ್ಗದ ತಿಂಗಳಕಡ್ ಸಮೀಪದ ಮುನಿಯಾರ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಮೂಲಗಳ ಪ್ರಕಾರ, ಕಿರಿದಾದ ರಸ್ತೆಯಲ್ಲಿ ಕೂದಲೆಳೆ ಅಂತರದ ತಿರುವಿನಲ್ಲಿ ಬಸ್ ಕಮರಿಗೆ ಬಿದ್ದಿತು. ಭಾರೀ ಸದ್ದು ಕೇಳಿ ಅಪಘಾತ ನಡೆದ ಸ್ಥಳಕ್ಕೆ ತೆರಳಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಗಾಯಾಳುಗಳನ್ನು ಆದಿಮಾಲಿ ತಾಲೂಕು ಆಸ್ಪತ್ರೆ ಹಾಗೂ ಕೋಳಂಚೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, ಮೃತನನ್ನು ಮಿಲ್ಹಾಜ್ ಎಂದು ಗುರುತಿಸಲಾಗಿದ್ದು, ಆರಂಭದಲ್ಲಿ ಕಾಣೆಯಾಗಿದ್ದಾನೆ ಎಂದು ಭಾವಿಸಲಾಗಿತ್ತು. "ಆದಾಗ್ಯೂ, ಬೆಳಿಗ್ಗೆ ಹೆಚ್ಚಿನ ಹುಡುಕಾಟದ ನಂತರ, ಅವರು ಬಸ್ಸಿನ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಯುವಕನನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟರು.

ಕಷ್ಟಕರವಾದ ಭೂಪ್ರದೇಶ ಮತ್ತು ಕತ್ತಲೆಯು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ವೆಲ್ಲತೂವಲ್ ಪೊಲೀಸರು ಮತ್ತು ಇಡುಕ್ಕಿ ಜಿಲ್ಲಾಧಿಕಾರಿ ಕೂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ನಿಗಾ ವಹಿಸಿದ್ದಾರೆ.

SCROLL FOR NEXT