ದೇಶ

ರಜೌರಿ ಉಗ್ರ ದಾಳಿ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ, ನೌಕರಿ ಘೋಷಿಸಿದ ಲೆಫ್ಟಿನೆಂಟ್ ಗವರ್ನರ್

Lingaraj Badiger

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಡ್ಯಾಂಗ್ರಿ ಗ್ರಾಮದಲ್ಲಿ ನಡೆದ ಭಯೋತ್ಪಾದಕ ದಾಳಿಕೋರರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೋಮವಾರ ಹೇಳಿದ್ದಾರೆ. ಅಲ್ಲದೆ ದಾಳಿಯಲ್ಲಿ ಮೃತಪಟ್ಟ ನಾಗರಿಕರ ಸಂಬಂಧಿಕರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದ್ದಾರೆ.

ರಜೌರಿ ಜಿಲ್ಲೆಯಲ್ಲಿ ಭಾನುವಾರ ನಡೆದ ಉಗ್ರ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಮೃತಪಟ್ಟ ವ್ಯಕ್ತಿಯೊಬ್ಬರ ಮನೆ ಬಳಿ ಸಂಭವಿಸಿದ ಐಇಡಿ ಸ್ಫೋಟದಲ್ಲಿ ಮಗುವೊಂದು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

"ರಜೌರಿಯಲ್ಲಿ ನಡೆದ ಹೇಡಿತನದ ಭಯೋತ್ಪಾದನಾ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಹೇಯ ಕೃತ್ಯಕ್ಕೆ ಕಾರಣರಾದವರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ನಾನು ಜನರಿಗೆ ಭರವಸೆ ನೀಡುತ್ತೇನೆ. ಮೃತರ ಕುಟುಂಬದೊಂದಿಗೆ ನಾವಿದ್ದೇನೆ" ಎಂದು ಸಿನ್ಹಾ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

"ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ" ಪ್ರತಿಯೊಬ್ಬ ನಾಗರಿಕರ ಸಂಬಂಧಿಕರಿಗೆ 10 ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಅವರು ಹೇಳಿದ್ದಾರೆ.

SCROLL FOR NEXT