ದೇಶ

ಸಾವಿರಾರು ಜನರನ್ನು ರಾತ್ರೋರಾತ್ರಿ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ: ಉತ್ತರಾಖಂಡದಲ್ಲಿ ಒತ್ತುವರಿ ತೆರವಿಗೆ ಸುಪ್ರೀಂ ಕೋರ್ಟ್ ತಡೆ

Ramyashree GN

ನವದೆಹಲಿ: ಹಲ್ದ್ವಾನಿಯಲ್ಲಿ ಅತಿಕ್ರಮಣ ಮಾಡಿಕೊಂಡಿರುವ ರೈಲ್ವೆ ಭೂಮಿಯಲ್ಲಿನ 29 ಎಕರೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಉತ್ತರಾಖಂಡ ಹೈಕೋರ್ಟ್‌ನ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.

ಒತ್ತುವರಿ ತೆರವಿಗೆ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ರೈಲ್ವೆ ಮತ್ತು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ರೈಲ್ವೇ ಪ್ರಕಾರ, 4,365 ಮಂದಿ ಭೂಮಿ ಅತಿಕ್ರಮಣದಾರರಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎ.ಎಸ್. ಓಕಾ ಅವರಿದ್ದ ಪೀಠವು ಇದು 'ಮಾನವ ಸಮಸ್ಯೆ' ಎಂದು ಗಮನಿಸಿತು ಮತ್ತು ಕೆಲವು ಕಾರ್ಯಸಾಧ್ಯವಾದ ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ ಎಂದು ಹೇಳಿತು.

ಭೂಮಿಯ ಮೇಲಿನ ಯಾವುದೇ ನಿರ್ಮಾಣ ಅಥವಾ ಅಭಿವೃದ್ಧಿಗಾಗಿ 50,000 ಜನರನ್ನು ರಾತ್ರೋರಾತ್ರಿ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರುವರಿ 7ಕ್ಕೆ ಮುಂದೂಡಿದೆ.

ಕಳೆದ ವರ್ಷ ಡಿಸೆಂಬರ್ 20 ರಂದು ಹಲ್ದ್ವಾನಿಯ ಬನ್‌ಭೂಲ್‌ಪುರದಲ್ಲಿನ ರೈಲ್ವೆಗೆ ಸಂಬಂಧಿಸಿದ ಅತಿಕ್ರಮಣವನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶಿಸಿತ್ತು. ಅಲ್ಲದೆ, ಅತಿಕ್ರಮಣದಾರರಿಗೆ ಒಂದು ವಾರ ಮುಂಚಿತವಾಗಿ ನೋಟಿಸ್ ನೀಡಿ ನಂತರ ಅತಿಕ್ರಮಣಗಳನ್ನು ನೆಲಸಮಗೊಳಿಸಬೇಕು ಎಂದು ನಿರ್ದೇಶನ ನೀಡಿತ್ತು.

ಅರ್ಜಿದಾರರು ಸೇರಿದಂತೆ ಅಲ್ಲಿನ ನಿವಾಸಿಗಳ ಹಕ್ಕುಪತ್ರಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಜಿಲ್ಲಾಧಿಕಾರಿಗಳ ಮುಂದಿದ್ದು, ಇದು ಇತ್ಯರ್ಥವಾಗದಿರುವ ಬಗ್ಗೆ ಅರಿವಿದ್ದರೂ ಹೈಕೋರ್ಟ್ ತಡೆಯಾಜ್ಞೆ ನೀಡುವಲ್ಲಿ ತಪ್ಪು ಹೆಜ್ಜೆ ಇಟ್ಟಿದೆ ಎಂದು ನಿವಾಸಿಗಳು ತಮ್ಮ ಮನವಿಯಲ್ಲಿ ದೂರಿದ್ದಾರೆ.

ಬನ್‌ಭೂಲ್‌ಪುರದಲ್ಲಿ ರೈಲ್ವೆ ಭೂಮಿಯಲ್ಲಿ ಅತಿಕ್ರಮಣ ಮಾಡಿರುವ 29 ಎಕರೆ ಪ್ರದೇಶದಲ್ಲಿ ಧಾರ್ಮಿಕ ಸ್ಥಳಗಳು, ಶಾಲೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ನಿವಾಸಗಳಿವೆ.

SCROLL FOR NEXT