ದೇಶ

ಮೇಯರ್ ಆಯ್ಕೆ ಚುನಾವಣೆ: ದೆಹಲಿ ಮಹಾನಗರ ಪಾಲಿಕೆಯಲ್ಲಿ ಹೈಡ್ರಾಮಾ, ಎಎಪಿ-ಬಿಜೆಪಿ ಸಂಘರ್ಷ, ತೀವ್ರ ಪ್ರತಿಭಟನೆ

Srinivasamurthy VN

ನವದೆಹಲಿ: ದೆಹಲಿ ಮೇಯರ್ ಚುನಾವಣೆ ಆಯ್ಕೆ ಪ್ರಕ್ರಿಯೆ ಇಂದು ನಡೆಯುತ್ತಿರುವ ಬೆನ್ನಲ್ಲೇ ದೆಹಲಿ ಮಹಾನಗರ ಪಾಲಿಕೆಯಲ್ಲಿ ಹೈಡ್ರಾಮಾ ನಡೆದಿದ್ದು, ದೆಹಲಿ ಆಡಳಿತಾರೂಢ ಎಎಪಿ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.

ಮೇಯರ್ ಆಯ್ಕೆ ಹಿನ್ನೆಲೆಯಲ್ಲಿ ದೆಹಲಿ ಮಹಾನಗರ ಪಾಲಿಕೆ (Municipal Corporation of Delhi- MCD)ಯಲ್ಲಿ ಶುಕ್ರವಾರ ಕೋಲಾಹಲ ಏರ್ಪಟ್ಟಿದ್ದು, ಆಮ್ ಆದ್ಮಿ ಪಾರ್ಟಿ(AAP) ಹಾಗೂ ಬಿಜೆಪಿ (BJP) ಸದಸ್ಯರು ಪರಸ್ಪರ ತಳ್ಳಾಟ ನಡೆಸಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪಾಲಿಕೆಯ ಕಲಾಪದ ನಡುವೆಯೇ ಪ್ರತಿಭಟನೆಗೆ ಮುಂದಾದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ತಾತ್ಕಾಲಿಕವಾಗಿ ಬಿಜೆಪಿಯ ಸತ್ಯಾ ಶರ್ಮಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುತ್ತಿದ್ದಂತೆ ಸಭೆಯಲ್ಲಿ ಸಂಘರ್ಷ ಶುರುವಾಯಿತು. ಶರ್ಮಾ ಅವರು ಮೊದಲಿಗೆ, ನಾಮನಿರ್ದೇಶನಗೊಂಡ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಪ್ ಸದಸ್ಯರು, ನಾಮನಿರ್ದೇಶನಗೊಂಡ ಸದಸ್ಯರಿಗಿಂತ ಮೊದಲು, ಚುನಾಯಿತ ಸದಸ್ಯರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಪಟ್ಟು ಹಿಡಿದರು. ಆಗ ಬಿಜೆಪಿ ಮತ್ತು ಆಪ್ ಸದಸ್ಯರ ಮಧ್ಯೆ ಜಟಾಪಟಿ ಆರಂಭವಾಯಿತು. ಹೊಸದಾಗಿ ಚುನಾಯಿತವಾದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ 10 ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಸಕ್ಸೇನಾ ಅವರು ಶುಕ್ರವಾರ ಮೇಯರ್ ಚುನಾವಣೆಯ ಅಧ್ಯಕ್ಷತೆ ವಹಿಸಲು ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಅವರನ್ನು ತಾತ್ಕಾಲಿಕ ಸ್ಪೀಕರ್ ಎಂದು ಘೋಷಿಸಿದರು. ಮೇಯರ್ ಆಯ್ಕೆಯ ಹಿನ್ನೆಲೆಯು ಆಪ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

ಪರಸ್ಪರ ತಳ್ಳಾಟ-ಬಡಿದಾಟ
ಚುನಾವಣೆ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಎಎಪಿ–ಬಿಜೆಪಿ ಪಕ್ಷದ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪಾಲಿಕೆ ಸದಸ್ಯರ ಕಚ್ಚಾಟದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಶೆಲ್ಲಿ ಒಬೆರಾಯ್‌ ಮೇಯರ್‌ ಮತ್ತು ಮಹಮ್ಮದ್‌ ಇಕ್ಬಾಲ್‌ ಉಪಮೇಯರ್‌ ಸ್ಥಾನಕ್ಕೆ ಎಎಪಿ ಅಭ್ಯರ್ಥಿಗಳಾಗಿದ್ದು, ಶೆಲ್ಲಿ, ಪೂರ್ವ ಪಟೇಲ್‌ ನಗರ ವಾರ್ಡ್‌ನಿಂದ ಮೊದಲ ಸಲ ಆಯ್ಕೆಯಾಗಿದ್ದಾರೆ. ಇಕ್ಬಾಲ್‌, ಚಾಂದಿನಿ ಮಹಲ್‌ ವಾರ್ಡ್‌ನಿಂದ ಎರಡನೆ ಸಲ ಜಯಶೀಲರಾಗಿದ್ದಾರೆ.

ಡಿ.7ರಂದು ನಡೆದ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ 134 ಸ್ಥಾನ ಗೆದ್ದಿತ್ತು. ಬಿಜೆಪಿ 104 ಸ್ಥಾನದಲ್ಲಿ ಜಯ ಗಳಿಸಿತ್ತು. ಎಎಪಿ ಗೆಲುವಿನ ಹೊರತಾಗಿಯೂ ತಮ್ಮ ಪಕ್ಷದವರೇ ಮೇಯರ್‌ ಆಗಲಿದ್ದಾರೆ ಎಂಬ ವಿಶ್ವಾಸವನ್ನು ಬಿಜೆಪಿ ಕೆಲ ನಾಯಕರು ವ್ಯಕ್ತಪಡಿಸಿದ್ದರು. ಹೀಗಾಗಿ ಮೇಯರ್‌ ಆಯ್ಕೆ ಕುತೂಹಲ ಮೂಡಿಸಿದೆ. 
 

SCROLL FOR NEXT