ದೇಶ

ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ: ಆರೋಪಿ ಪತ್ತೆಗಾಗಿ ಲುಕ್‌ ಔಟ್‌ ನೋಟಿಸ್‌

Nagaraja AB

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಪತ್ತೆಗಾಗಿ ಲುಕ್‌ಔಟ್‌ ನೋಟಿಸ್‌ ಹೊರಡಿಸಲಾಗಿದೆ. ಈ ವಿಚಾರದಲ್ಲಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಹೊರಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.  

ಈವರೆಗೂ ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿ ಮಾತ್ರ ವಿಚಾರಣೆಗೆ ಸಹಕರಿಸಿದ್ದಾರೆ. ಇಂದು ಇತರರ ವಿಚಾರಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಗುರುವಾರ ಲುಕ್‌ಔಟ್‌ ನೋಟಿಸ್‌ ಹೊರಡಿಸುವಂತೆ ಕೋರಿ ವಲಸೆ ಅಧಿಕಾರಿಗಳಿಗೆ ದೆಹಲಿ ಪೊಲೀಸರು ಪತ್ರ ಬರೆದಿದ್ದರು.  

ಆರೋಪಿಯನ್ನು ಮುಂಬೈ ನಿವಾಸಿ ಎಸ್.ಮಿಶ್ರಾ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ನವೆಂಬರ್ 26 ರಂದು ಅಮೆರಿಕದ ನ್ಯೂಯಾರ್ಕ್‌ನಿಂದ ದಿಲ್ಲಿಗೆ ಬರುತ್ತಿದ್ದ ವಿಮಾನದಲ್ಲಿ ಸುಮಾರು 70 ವರ್ಷದ ವೃದ್ಧೆ ಮೇಲೆ ಆತ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ನಿವಾಸ ಮುಂಬೈ ಆಗಿದೆ, ಆದರೆ ಆತನ ಲೋಕೇಶನ್ ಇತರ ರಾಜ್ಯಗಳನ್ನು ತೋರಿಸುತ್ತಿದೆ. ಪೊಲೀಸರು ಅಲ್ಲಿಗೆ ತಲುಪಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಏರ್ ಇಂಡಿಯಾ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು. 

SCROLL FOR NEXT