ಥಾಣೆ: ಮಹಾರಾಷ್ಟ್ರದ ಭಿವಂಡಿ ಪಟ್ಟಣದ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಫೆಬ್ರುವರಿ 4ಕ್ಕೆ ಮುಂದೂಡಿದೆ.
ಶನಿವಾರ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ಎಲ್. ಸಿ. ವಾಡಿಕರ್, ಪ್ರಕರಣವನ್ನು ಮುಂದೂಡಿ ಆದೇಶಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸ್ಥಳೀಯ ಕಾರ್ಯಕರ್ತ ಹಾಗೂ ದೂರುದಾರ ರಾಜೇಶ್ ಕುಂಟೆ ಮತ್ತು ರಾಹುಲ್ ಗಾಂಧಿ ಅವರ ಪರ ವಕೀಲರ ವಾದವನ್ನು ಆಲಿಸಿದ ನಂತರ ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ಫೆಬ್ರುವರಿ 4 ರಂದು ವಿಚಾರಣೆಗೆ ಮುಂದೂಡಿದರು.
2014 ರಲ್ಲಿ, ರಾಜೇಶ್ ಕುಂಟೆ ಅವರು ಥಾಣೆಯ ಭಿವಂಡಿ ಟೌನ್‌ಶಿಪ್‌ನಲ್ಲಿ ಮಾಡಿದ ಭಾಷಣವನ್ನು ವೀಕ್ಷಿಸಿದ ನಂತರ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಧಿಯವರು, ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಆರೋಪಿಸಿದ್ದರು.
ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿರುವ ಕಾಂಗ್ರೆಸ್ ನಾಯಕನ ಅರ್ಜಿಗೆ ನ್ಯಾಯಾಲಯವು ಶನಿವಾರ ಅನುಮತಿ ನೀಡಿದೆ ಎಂದು ರಾಹುಲ್ ಗಾಂಧಿ ಪರ ವಕೀಲ ನಾರಾಯಣ ಅಯ್ಯರ್ ಸೋಮವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಇದನ್ನೂ ಓದಿ: ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು
ವಿಚಾರಣೆಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ಕೋರಿರುವ ರಾಹುಲ್ ಗಾಂಧಿ ಅವರ ವಿಚಾರದ ಕುರಿತು ಫೆಬ್ರವರಿ 4 ರಂದು ವಾದಿಸಲಾಗುವುದು ಎಂದು ಅವರು ಹೇಳಿದರು.
2018 ರಲ್ಲಿ, ನ್ಯಾಯಾಲಯವು ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧದ ಆಪಾದನೆಯನ್ನು ನಿಗದಿಪಡಿಸಿತ್ತು. ಆದರೆ, ತಾವು ತಪ್ಪು ಮಾಡಿಲ್ಲ ಎಂದಿದ್ದ ರಾಹುಲ್ ಗಾಂಧಿ, ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.