ದೇಶ

ದೆಹಲಿ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಮೂತ್ರ ವಿಸರ್ಜನೆ; ವ್ಯಕ್ತಿಯ ಬಂಧನ

Ramyashree GN

ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ರ ನಿರ್ಗಮನ ಪ್ರದೇಶದ ಗೇಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಆರೋಪದ ಮೇಲೆ 39 ವರ್ಷದ ಕುಡುಕ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಭಾನುವಾರ ಸಂಜೆ ನಡೆದ ಘಟನೆ ನಂತರ ಬಂಧಿತನಾಗಿದ್ದ ಬಿಹಾರದ ನಿವಾಸಿ ಜೌಹರ್ ಅಲಿ ಖಾನ್ ಅವರನ್ನು ಅದೇ ದಿನ ಜಾಮೀನು ಬಾಂಡ್ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದರು.

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ರ ನಿರ್ಗಮನ ಪ್ರದೇಶದ ಗೇಟ್ ಸಂಖ್ಯೆ -6 ರಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಭಾನುವಾರ ಸಂಜೆ 5.30 ರ ಸುಮಾರಿಗೆ ನಮಗೆ ಮಾಹಿತಿ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಖಾನ್ ಕುಡಿದ ಅಮಲಿನಲ್ಲಿದ್ದಂತೆ ತೋರುತ್ತಿತ್ತು. ಆತ ಸಾರ್ವಜನಿಕ ಸ್ಥಳದಲ್ಲಿ ಕಿರುಚುವ ಮತ್ತು ಇತರ ಜನರನ್ನು ನಿಂದಿಸುವ ಮೂಲಕ ತೊಂದರೆಯನ್ನು ಉಂಟುಮಾಡಿದರು. ಆತ ಸೌದಿ ಅರೇಬಿಯಾದ ದಮಾಮ್‌ಗೆ ತೆರಳಬೇಕಿತ್ತು ಎಂದು ಅವರು ಹೇಳಿದರು.

ಖಾನ್ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಯಿತು ಮತ್ತು ಅವರು ಮದ್ಯ ಸೇವಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಉಪ ಆಯುಕ್ತ (ವಿಮಾನ ನಿಲ್ದಾಣ) ರವಿಕುಮಾರ್ ಸಿಂಗ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 294 ಮತ್ತು 510 ರ ಅಡಿಯಲ್ಲಿ ಪ್ರಕರಣವನ್ನು ಐಜಿಐ ವಿಮಾನ ನಿಲ್ದಾಣದಲ್ಲಿ ದಾಖಲಿಸಲಾಗಿದೆ ಮತ್ತು ಖಾನ್ ಅವರನ್ನು ಬಂಧಿಸಲಾಗಿದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಕಳೆದ ವರ್ಷ ನವೆಂಬರ್ 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.

ಮಹಿಳೆ ಏರ್ ಇಂಡಿಯಾಗೆ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಜನವರಿ 4 ರಂದು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿ ಶನಿವಾರ ಬೆಂಗಳೂರಿನಿಂದ ಬಂಧಿಸಿದ್ದರು. ನಂತರ ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು.

SCROLL FOR NEXT