ದೇಶ

ಥಾಣೆ: ಮಹಿಳೆಗೆ 22 ಲಕ್ಷ ರೂ. ವಂಚಿಸಿದ ಫೇಸ್ ಬುಕ್ ಫ್ರೆಂಡ್!

Lingaraj Badiger

ಥಾಣೆ: ಥಾಣೆ ನಗರದ 36 ವರ್ಷದ ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ಆಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 22.67 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಈ ಸಂಬಂಧ ಗುರುವಾರ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆನ್‌ಲೈನ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ, ಫೆಬ್ರವರಿ 2022 ರಲ್ಲಿ ಪುರುಷನಿಂದ ಬಂದಿದ್ದ ಸ್ನೇಹದ ವಿನಂತಿಯನ್ನು ಒಪ್ಪಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಇಬ್ಬರೂ ನಿಯಮಿತವಾಗಿ ಆನ್‌ಲೈನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದ್ದರು. ಈ ವೇಳೆ ಆ ವ್ಯಕ್ತಿ ತನ್ನ ತಾಯಿಯ ಚಿಕಿತ್ಸೆಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಹೇಳಿದ್ದಾನೆ. ಮಹಿಳೆ ಹಣ ಕಳುಹಿಸುವ ಮೂಲಕ ಆತನಿಗೆ ಸಹಾಯ ಮಾಡಿದ್ದಾಳೆ. ಇದೇ ರೀತಿ ಹಲವು ಸಂದರ್ಭಗಳಲ್ಲಿ ಮಹಿಳೆ ಆತನಿಗೆ ಹಣ ನೀಡಿದ್ದಾರೆ.

ಮಹಿಳೆ ಆರೋಪಿಗೆ 7,25,000 ರೂಪಾಯಿ ಹಣ ಮತ್ತು 15,42,688 ರೂಪಾಯಿ ಮೌಲ್ಯದ ಚಿನ್ನಾಭರಣವನ್ನೂ ನೀಡಿದ್ದಾಳೆ. ಅದನ್ನು ವಾಪಸ್ ನೀಡುವಂತೆ ಕೇಳಿದಾಗ, ಆ ವ್ಯಕ್ತಿ ಮಹಿಳೆಯಿಂದ ತಪ್ಪಿಸಿಕೊಳ್ಳಲು  ಪ್ರಾರಂಭಿಸಿದ. ಹೀಗಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 ಅಡಿಯಲ್ಲಿ ವರ್ತಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಆದರೆ ಇದುವರೆಗೆ ಯಾರ ಬಂಧನವೂ ಆಗಿಲ್ಲ.

SCROLL FOR NEXT