ದೇಶ

ಸಚಿವರ ಸೂಚನೆ ಮೇರೆಗೆ ಜೋಶಿಮಠದ ಉಪಗ್ರಹ ಚಿತ್ರ, ವರದಿ ತೆಗೆದು ಹಾಕಿದ ಇಸ್ರೋ

Lingaraj Badiger

ಜೋಶಿಮಠ: ರಾಜ್ಯ ಸರ್ಕಾರದ ಆಕ್ಷೇಪದ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೋಶಿಮಠದಲ್ಲಿ ಭೂಮಿ ಕುಸಿಯುತ್ತಿರುವ ಬಗ್ಗೆ ಪ್ರಕಟಿಸಿದ್ದ ಉಪಗ್ರಹ ಚಿತ್ರಗಳನ್ನು ಮತ್ತು ವರದಿಯನ್ನು ತೆಗೆದುಹಾಕಿದೆ. 

ಜೋಶಿಮಠದ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಇಲ್ಲಿಯೇ ಮೊಕ್ಕಾಂ ಹೂಡಿರುವ ರಾಜ್ಯ ಕ್ಯಾಬಿನೆಟ್ ಸಚಿವ ಡಾ ಧನ್ ಸಿಂಗ್ ರಾವತ್ ಅವರು ಇಸ್ರೋ ಅಧಿಕಾರಿಗಳನ್ನು ಸಂಪರ್ಕಿಸಿದ ನಂತರ ಇದನ್ನು ಖಚಿತಪಡಿಸಿದ್ದಾರೆ.

ಈ ಮಧ್ಯೆ, ವಿಜ್ಞಾನಿಗಳು, ಭೂವಿಜ್ಞಾನಿಗಳು ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳು ಜೋಶಿಮಠದ ಭೂ ಕುಸಿತಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ವರದಿ, ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.

ವಾಸ್ತವವಾಗಿ, ಇಸ್ರೋದ ಈ ವರದಿಯು ಕಳೆದ 12 ದಿನಗಳಲ್ಲಿ ಅಂದರೆ 27 ಡಿಸೆಂಬರ್ 2022 ರಿಂದ ಜನವರಿ 8, 2023 ರವರೆಗೆ ಜೋಶಿಮಠದಲ್ಲಿ 5.4 ಸೆಂ.ಮೀ ಭೂಕುಸಿತವಾಗಿದೆ ಎಂದು ಹೇಳಿತ್ತು. ಕಳೆದ ಏಳು ತಿಂಗಳಲ್ಲಿ ಜೋಶಿಮಠದಲ್ಲಿ 9 ಸೆಂ.ಮೀ ಭೂಕುಸಿತವಾಗಿದೆ ಎಂದು ಇಸ್ರೋ ಕಾಟ್ರೋಸ್ಯಾಟ್ -2ಎಸ್ ಉಪಗ್ರಹದಿಂದ ತೆಗೆದ ಚಿತ್ರದ ಆಧಾರದಲ್ಲಿ ಹೇಳಿತ್ತು.

ಜೋಶಿಮಠ ಮುಳುಗಡೆಗೆ ಸಂಬಂಧಿಸಿದ ಇಸ್ರೋ ಚಿತ್ರಗಳು ವೈರಲ್ ಆದ ನಂತರ ಮತ್ತು ಟಿವಿ ಚಾನೆಲ್‌ಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕ ಜೋಶಿಮಠ ನಗರದ ಜನರಲ್ಲಿ ಭೀತಿ ಹೆಚ್ಚಾಗಿತ್ತು. ಉಪಗ್ರಹ ಚಿತ್ರಗಳ ಬಗ್ಗೆ ಅಧಿಕೃತ ಹೇಳಿಕೆ ನೀಡುವಂತೆ ಅಥವಾ ವೆಬ್‌ಸೈಟ್‌ನಿಂದ ಫೋಟೋಗಳನ್ನು ತೆಗೆದುಹಾಕುವಂತೆ ಇಸ್ರೋಗೆ ಕೇಳಿಕೊಂಡಿದೆ ಎಂದು ಸಚಿವ ಡಾ ಧನ್ ಸಿಂಗ್ ಹೇಳಿದ್ದಾರೆ.

SCROLL FOR NEXT