ದೇಶ

ಗಾಳಿಪಟದ ದಾರದಿಂದ ವ್ಯಕ್ತಿ ಬಲಿ: ಥಾಣೆ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ

Ramyashree GN

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಗಾಳಿಪಟದ ದಾರವು ಕುತ್ತಿಗೆಯನ್ನು ಸೀಳಿ 47 ವರ್ಷದ ವ್ಯಕ್ತಿ ಮೃತಪಟ್ಟ ನಂತರ ನಿಷೇಧಿತ ನೈಲಾನ್ 'ಮಾಂಜಾ'ವನ್ನು ದಾಸ್ತಾನು ಮಾಡಿ ಮಾರಾಟ ಮಾಡಿದ್ದಕ್ಕಾಗಿ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಭಾನುವಾರ ರಾತ್ರಿ ಭಿವಂಡಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಮೋಟಾರ್ ಸೈಕಲ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ಗಾಳಿಪಟದ ದಾರವು ಆತನ ಕುತ್ತಿಗೆಗೆ ಸಿಕ್ಕಿಹಾಕಿಕೊಂಡು, ಕುತ್ತಿಗೆಯನ್ನು ಸೀಳಿತು ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ಅಂಗಡಿಯವರೊಬ್ಬರು ನಿಷೇಧಿತ ನೈಲಾನ್ ಗಾಳಿಪಟದ ದಾರವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಸುಳಿವು ಸಿಕ್ಕಿದೆ ಎಂದು ಭಿವಂಡಿ ಪಟ್ಟಣ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್ ತಂಡವು ಅಂಗಡಿ ಮೇಲೆ ದಾಳಿ ನಡೆಸಿ ಅಲ್ಲಿಂದ ಗಾಳಿಪಟ ದಾರದ ದಾಸ್ತಾನನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.

ಭಾರತೀಯ ದಂಡ ಸಂಹಿತೆ ಸೆಕ್ಷನ್ 188, 290 (ಸಾರ್ವಜನಿಕರಿಗೆ ತೊಂದರೆ) ಮತ್ತು 291 (ನಿಲ್ಲಿಸುವಂತೆ ತಡೆಯಾಜ್ಞೆ ನೀಡಿದ ನಂತರ ತೊಂದರೆ ಮುಂದುವರಿಸುವುದು) ಅಡಿಯಲ್ಲಿ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ಹೇಳಿದರು.

SCROLL FOR NEXT